Site icon Vistara News

HD DeveGowda | ಜೆಡಿಎಸ್‌ಗೆ ಶಕ್ತಿ ತುಂಬಲು ಕುಮಾರಸ್ವಾಮಿ ಜತೆ ರಾಜ್ಯ ಪ್ರವಾಸ, ಎಚ್‌.ಡಿ.ದೇವೇಗೌಡ ಘೋಷಣೆ

HD Deve Gowda

ಹಾಸನ: ಎಚ್.ಡಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಹೀಗಾಗಿ ಜೆಡಿಎಸ್‌ಗೆ ಶಕ್ತಿ ತುಂಬಲು ಕುಮಾರಸ್ವಾಮಿ ಜತೆ ನಾನೂ ರಾಜ್ಯ ಪ್ರವಾಸ ಮಾಡುತ್ತೇನೆ. ಮುಂದೆ ಹಾಸನ ಜಿಲ್ಲೆಯಲ್ಲೂ ಯಾತ್ರೆ ನಡೆಯಲಿದೆ. ಆಗ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಪ್ರವಾಸ ಮಾಡುತ್ತೇನೆ. ಆ ಸಂದರ್ಭದಲ್ಲೂ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Deve Gowda) ಹೇಳಿದರು.

ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಜ್ಯ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಜಿಲ್ಲೆಯ ಏಳು ತಾಲೂಕುಗಳಲ್ಲೂ ಪಕ್ಷ ಸಂಘಟನೆಗೆ ಜೆಡಿಎಸ್‌ ನಾಯಕರ ಜತೆ ಒಗ್ಗೂಡಿ ಕೆಲಸ ಮಾಡಲು ಸರ್ವ ಪ್ರಯತ್ನ ಮಾಡುತ್ತೇನೆ. ಹಾಸನ ಜಿಲ್ಲೆಯಲ್ಲಿ ಎದುರಾಳಿಗಳ ವಿರುದ್ಧ ಹೋರಾಟ ಮಾಡಿ ರೇವಣ್ಣ ಗೆದ್ದಿಲ್ವಾ, ಪ್ರಜ್ವಲ್ ಲೋಕಸಭೆಗೆ ಹೋಗಿಲ್ವಾ, ಡಾ.ಸೂರಜ್ ಎಂಎಲ್‌ಸಿ ಆಗಿಲ್ವಾ? ಎಂದ ಅವರು ಜಿಲ್ಲಾ ಪ್ರವಾಸದ ಸಂದರ್ಭದಲ್ಲೂ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.

ಇದನ್ನೂ ಓದಿ | Shimoga News : ಪರಿಶಿಷ್ಟರ ಕಲ್ಯಾಣ ಯೋಜನೆಗಳಲ್ಲಿ ಅವ್ಯವಹಾರ, ಜ. 8ರಂದು ಚಿತ್ರದುರ್ಗದಲ್ಲಿ ಸಮಾವೇಶ: ಡಾ. ಜಿ. ಪರಮೇಶ್ವರ್

ಕೆ.ಎಂ.ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಲಿಂಗೇಗೌಡ ಯಾವ್ಯಾವ ಸಂದರ್ಭದಲ್ಲಿ ಏನೇನು ಹೇಳಿದ್ದಾರೆ ಎಂಬುದರ ಬಗ್ಗೆ ತುಂಬಾ ಚರ್ಚೆ ಮಾಡಲು ಹೋಗಲ್ಲ. ಎ.ಟಿ.ರಾಮಸ್ವಾಮಿ ವಿಷಯ ಬೇರೆ, ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ. ನಿನ್ನೆ ಇಬ್ಬರೂ ಕುಳಿತು ಮಾತನಾಡಿದ್ದೇವೆ. ಏನೇನು ನಡಿಯುತ್ತಿದೆ ಎನ್ನುವ ವಿಷಯವನ್ನು ಚರ್ಚೆ ಮಾಡಿದ್ದೇವೆ. ಅವರ ಮನಸ್ಸಿನಲ್ಲಿರುವುದನ್ನು ಹೇಳಿದ್ದಾರೆ ಎಂದು ತಿಳಿಸಿದರು.

ಅರಸೀಕೆರೆ ಜೆಡಿಎಸ್ ಕಾರ್ಯಕರ್ತರು, ಮಾಜಿ ಸಚಿವ ಎಚ್.ಡಿ.ರೇವಣ್ಣರನ್ನು ಭೇಟಿಯಾದ ವಿಚಾರಕ್ಕೆ ಉತ್ತರಿಸಿ, ರೇವಣ್ಣ ಏನು ಹೇಳಿದ್ದಾರೆ ಅದು ಸಂಬಂಧವಿಲ್ಲ. ಅವರು ಏನು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೋ ಗೊತ್ತಿಲ್ಲ. ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ನಾನೇ ಸ್ವತಃ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಾನು ಏನು ಮಾತನಾಡಿದ್ದೇನೆ, ಅವರ ಮನಸ್ಸಿನಲ್ಲಿ ಏನೇನು ಭಾವನೆ ಇದೆ ಅದಕ್ಕೆ ಇತಿಶ್ರಿ ಹಾಡಬೇಕು ಎಂದು ಹೇಳಿದರು.

ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಜಿಲ್ಲೆಯ ಜನ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ. ಈ ಜಿಲ್ಲೆಯ ಜನ ನನಗೆ ಈ ವಯಸ್ಸಿನಲ್ಲೂ ಪ್ರೀತಿ, ಗೌರವ ತೋರಿದ್ದಾರೆ ಎಂದ ಅವರು, ಕಾಂಗ್ರೆಸ್ ದೇಶದ ಮೂಲೆ ಮೂಲೆಯಲ್ಲಿ ಅರಳಿದಾಗ ವಿರೋಧ ಪಕ್ಷದ ನಾಯಕ ನುಗ್ಗೇಹಳ್ಳಿ ಶಿವಪ್ಪ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟರು. ನಾನು ಇಂದಿರಾ ಕಾಂಗ್ರೆಸ್‌ಗೆ ಸೇರುವ ನಿರ್ಣಯ ಮಾಡಿದ್ದೇನೆ ಎಂದಿದ್ದರು. ಅವರ ಜತೆ ಎಂಟರಿಂದ ಹತ್ತು ಶಾಸಕರು ರಾಜೀನಾಮೆ ನೀಡಿದರು. ಆಗ ನನ್ನನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರು. ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇರಬಾರದೆಂದು‌ ನನ್ನನ್ನು ನೇಮಿಸಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು.

ಚೆರ‍್ರಿ ಹಣ್ಣುಗಳ ಹಾರದಿಂದ ಎಚ್‌ಡಿಡಿಗೆ ಸ್ವಾಗತ; ಹಣ್ಣುಗಳಿಗೆ ಮುಗಿಬಿದ್ದ ಜನ
ಚನ್ನಪಟ್ಟಣದ ಕಬ್ಬಡ್ಡಿ ಪಂದ್ಯಾವಳಿಗೆ ಆಗಮಿಸುವಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಮೊಮ್ಮಗ ಸೂರಜ್‌ ರೇವಣ್ಣ ಬೆಂಬಲಿಗರು ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದರು. ನಂತರ ಕಾರ್ಯಕರ್ತರು ಚೆರ‍್ರಿ ಹಣ್ಣಿನ ಬೃಹತ್‌ ಹಾರ ಹಾಕಿ ಮಾಜಿ ಪ್ರಧಾನಿಯನ್ನು ಬರಮಾಡಿಕೊಂಡರು. ಬಳಿಕ ಜನರು ಹಾರದಲ್ಲಿದ್ದ ಚೆರ‍್ರಿ ಹಣ್ಣುಗಳಿಗಾಗಿ ಮುಗಿಬಿದ್ದರು. ಹಾರ ರಸ್ತೆಯಲ್ಲಿ ಬಿದ್ದರೂ ಬಿಡದೆ ಹಣ್ಣುಗಳನ್ನು ಕಿತ್ತು ತಿಂದದ್ದು ಕಂಡುಬಂತು.

ಇದನ್ನೂ ಓದಿ | Swadeshi Mela | ಸ್ವದೇಶಿ ವಸ್ತುಗಳ ಕುರಿತು ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

Exit mobile version