ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಯ್ಕೆಯಾಗಿದ್ದಾರೆ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ 2022ನೇ ಸಾಲಿನ ದತ್ತಿ ಪ್ರಶಸ್ತಿಗೆ ಎಚ್.ಡಿ. ದೇವೇಗೌಡರನ್ನು ಆಯ್ಕೆ ಮಾಡಲಾಗಿದೆ.
ನಾಲ್ವಡಿಯವರು ನಾಡಿನ ಅಭ್ಯುದಯದ ಕನಸು ಕಂಡವರು. ಅವರ ಆಶಯದಂತೆ ನಾಡಿನಲ್ಲಿ ಕೈಗಾರಿಕಾ ಕ್ಷೇತ್ರ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲಿಕರಣ ಸೇರಿ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ ಪ್ರತಿ ವರ್ಷ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼಯನ್ನು ನೀಡಬೇಕು ಎನ್ನುವ ಮೂಲ ಆಶಯ ಈ ದತ್ತಿ ಪ್ರಶಸ್ತಿಯದ್ದಾಗಿದೆ. ಪ್ರಶಸ್ತಿಯು 51,000 ರೂ. ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.
ಇದುವರೆಗೂ ನಾಡಿನ 12 ಗಣ್ಯರಿಗೆ ಪರಿಷತ್‌ನ ಪ್ರತಿಷ್ಠಿತ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼ ಪ್ರದಾನ ಮಾಡಲಾಗಿದೆ. ಈ ಬಾರಿಯ ಆಯ್ಕೆ ಸಮಿತಿಯು ಮಾಜಿ ಪ್ರಧಾನಿ ಎಚ್,ಡಿ.ದೇವೇಗೌಡ ಅವರಿಗೆ 2022ನೇ ಸಾಲಿನ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼಗಾಗಿ ಆಯ್ಕೆಮಾಡಿದೆ. ದೇವೇಗೌಡರು ನಾಡಿನ ನೀರಾವರಿ ಕ್ಷೇತ್ರ, ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸೇರಿ ಸಮಗ್ರ ಕನ್ನಡ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ | ರಾಜಮಾರ್ಗ ಅಂಕಣ: ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರತಿಕ್ರಿಯಿಸಿ, ರೈತನ ಮಗನಾದ ದೇವಗೌಡರು ರಾಜಕೀಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ತಮಗೆ ದಕ್ಕಿದ ವಿವಿಧ ಸ್ಥಾನಮಾನಕ್ಕೆ ಸೂಕ್ತ ನ್ಯಾಯವನ್ನು ನೀಡಿ, ಮುಖ್ಯಮಂತ್ರಿ ಪಟ್ಟದಿಂದ ದೇಶದ ಉನ್ನತ ಸ್ಥಾನವಾಗಿರುವ ಪ್ರಧಾನಿ ಸ್ಥಾನಕ್ಕೆ ಏರಿದ ಮೊದಲ ಕನ್ನಡಿಗರಾಗಿದ್ದಾರೆ. ಸಮಗ್ರ ಕನ್ನಡ ನಾಡಿನ ಅಭಿವೃದ್ಧಿಯ ಕನಸು ಕಂಡ ಅವರು ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ಹೋರಾಟ ಮಾಡುತ್ತಲೇ ಬಂದವರು. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಸಮಿತಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼಗೆ ಆಯ್ಕೆ ಮಾಡಿದೆ ಎಂದು ತಿಳಿಸಿದರು.
ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿಗೂ ಅಪಾರ ಕೊಡುಗೆ ನೀಡಿದ್ದರು. ಪರಿಷತ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಇಲ್ಲಿನ ಸಿಬ್ಬಂದಿ ಕಾಯಮಾತಿ ಮಾಡಿದ್ದರು. ಇದರೊಂದಿಗೆ ಪರಿಷತ್ತಿಗೆ ಸರ್ಕಾರ ಕಾಯಂ ಅನುದಾನ ನೀಡಬೇಕು ಎನ್ನುವ ಸರ್ಕಾರಿ ಆದೇಶವನ್ನು ಹೊರಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಕಾಳಜಿ ಹೊಂದಿದ್ದ ಅವರು ಕಾಲ ಕಾಲಕ್ಕೆ ಪರಿಷತ್ತಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುವುದರ ಜತೆ ಪರಿಷತ್ತಿನ ಇತ್ತೀಚಿನ ಬೆಳವಣಿಗೆಗೆ ಮೆಚ್ಚುಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ʻ2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗಾಗಿ ಅವರನ್ನು ಆಯ್ಕೆ ಮಾಡಿರುವ ಸಂಗತಿಯನ್ನು ಅವರ ನಿವಾಸಕ್ಕೆ ತೆರಳಿ ತಿಳಿಸಿ, ಪ್ರಶಸ್ತಿ ಸ್ವಿಕರಿಸುವಂತೆ ಮನವಿ ಮಾಡಿದಾಗ ತುಂಬು ಮನಸ್ಸಿನಿಂದ ದೆವೇಗೌಡರು ಒಪ್ಪಿಕೊಂಡು ಪ್ರಶಸ್ತಿಗಾಗಿ ಸಂತಸ ವ್ಯಕ್ತ ಪಡಿಸಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ | Book release: ಹಳದೀಪುರ ವಾಸುದೇವ ರಾವ್ ಅವರ ʼಮನೋಲ್ಲಾಸʼ ಕೃತಿ ನಾಳೆ ಬಿಡುಗಡೆ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಇದ್ದರು.