ಹಾಸನ: ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲ. ನಾನು ಏಕಾಂಗಿಯಾಗಿ ಸಂಸತ್‌ನಲ್ಲಿ ಹೋರಾಡಿದೆ. ಹೀಗಾಗಿ ಕಾವೇರಿ ಕೊಳ್ಳದ ಹತ್ತು ಕ್ಷೇತ್ರದ ಮೈತ್ರಿ ಸದಸ್ಯರು ಗೆಲ್ಲಬೇಕು. ಹತ್ತು ಸಂಸದರು ಮುಷ್ಟಿ ಹಿಡಿದು ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ನಿಲ್ಲಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Devegowda) ಹೇಳಿದರು.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಂಜಿಗನಹಳ್ಳಿಯಲ್ಲಿ ಶನಿವಾರ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾವು ಕಾವೇರಿ ಬೇಸಿನ್‌ನ 10 ಜಿಲ್ಲೆಯವರು ನದಿಯ ನೀರು ಕುಡಿಯುತ್ತೇವೆ. ತಮಿಳುನಾಡಿನ ಮುಖ್ಯಮಂತ್ರಿ ನಮ್ಮ ರಾಜ್ಯಕ್ಕೆ ಒಂದು ಹನಿ ನೀರು ಕೊಡಲ್ಲ ಎಂದು ಪ್ರಣಾಳಿಕೆಯಲ್ಲಿ ಹಾಕುತ್ತಾರೆ. ನಾನು ಒಬ್ಬನೇ ಇದ್ದೇನೆ ಏನು ಮಾಡಲಿ? ಒಬ್ಬ ಮೊಮ್ಮಗ ಪ್ರಜ್ವಲ್‌ರೇವಣ್ಣ ಏನ್ ಮಾಡ್ತಾನೆ, ಹೀಗಾಗಿ ಕಾವೇರಿ ಬೇಸಿನ್‌ನ ಹತ್ತು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು ಎಂದು ತಿಳಿಸಿದರು.
ರೇವಣ್ಣ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರ ತರಹ ಕೆಲಸ ಮಾಡುವುವವರು ಯಾರಾದರೂ ಇದ್ದರೆ ನನ್ನ ಮುಂದೆ ಬಂದು ನಿಲ್ಲಬಹುದು. ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ ಹೋದರೆ ಲಕ್ಷಾಂತರ ರೂ ಫೀಸ್ ಕಟ್ಟಬೇಕು. ರೇವಣ್ಣ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಎಂಜಿನಿಯರಿಂಗ್ ಕಾಲೇಜು ಮಾಡಿದ್ದಾರೆ. ಅಲ್ಲಿ ಓದಲು ಐದು ಸಾವಿರ ರೂ. ಸಾಕು. ವಿದ್ಯಾರ್ಥಿಗಳು ಉಪವಾಸ ಇರಬಾರದೆಂದು ಹಾಸ್ಟೆಲ್ ಕಟ್ಟಿದ್ದಾರೆ. ರೇವಣ್ಣ ದೊಡ್ಡ ವಿದ್ಯಾವಂತ ಅಲ್ಲ, ಬಿಎ ಗ್ರ್ಯಾಜುಯ ಟ್ ಅಲ್ಲ, ಬರೀ ಎಸ್‌ಎಸ್‌ಎಲ್‌ಸಿ ಎಂದು ಹೇಳಿದರು.
ಇದನ್ನೂ ಓದಿ | Lok Sabha Election 2024: ಐಐಟಿ, ಐಐಎಂ, ಚಂದ್ರಯಾನ ನೆಹರೂ ಕೊಡುಗೆ; ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಯಗಚಿ, ಹೇಮಾವತಿ ಕಟ್ಟಿದವರು ಯಾರು? ಕುಮಾರಸ್ವಾಮಿ ಅವರು ಪಂಚರತ್ನ ಕಾರ್ಯಕ್ರಮ ಮಾಡಿದರು. ಪ್ರತಿ ಹೋಬಳಿಯಲ್ಲಿ ಆಸ್ಪತ್ರೆ, ಪಂಚಾಯಿತಿಯಲ್ಲಿ ಮಾದರಿ ಪಬ್ಲಿಕ್ ಶಾಲೆ ಮಾಡುವ ಯೋಜನೆ ಹಾಕಿಕೊಂಡಿದ್ದರು. 86 ಸಾವಿರ ಕೋಟಿ ಸಾಲಮನ್ನಾ ಮಾಡಿದಂತಹ ಮುಖ್ಯಮಂತ್ರಿ ಯಾವನಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದ ಅವರು, ಏ.18 ರಂದು ಹಾಸನ ಜಿಲ್ಲೆಗೆ ಸಿದ್ದರಾಮಯ್ಯ, ಡಿಕೆಶಿ ಬರುತ್ತಾರೆ. ನಾನು ಅವರ ಹಿಂದೆಯೇ ಹೋಗುತ್ತೇನೆ. ಯೋಗ್ಯತೆ ಇದ್ದರೆ ಅವರು ಮಾತನಾಡಲಿ ಎಂದು ಸವಾಲು ಹಾಕಿದರು.
ಇವತ್ತು ನಾನು ಬಂದಿರುವುದು ಒಬ್ಬ ಪ್ರಜ್ವಲ್ ರೇವಣ್ಣನ ಗೆಲ್ಲಿಸಲು ಅಲ್ಲ, ತುಮಕೂರಿಗೆ ಹೋಗುವೆ ಸೋಮಣ್ಣ ಗೆಲ್ಲಬೇಕು. ಮೈಸೂರಿಗೆ ಹೋಗುತ್ತೇನೆ ಮಹಾರಾಜರು ಗೆಲ್ಲಬೇಕು. ಮಂಡ್ಯಕೆ ಹೋಗುತ್ತೇನೆ ಕುಮಾರಸ್ವಾಮಿ ಗೆಲ್ಲಬೇಕು. ನಾಳೆ ನರೇಂದ್ರ ಮೋದಿಯವರು ನೀವು ಬಂದು ನನ್ನ ಜತೆ ಕುಳುತುಕೊಳ್ಳಬೇಕು ಎನ್ನುತ್ತಾರೆ. ದೇವೇಗೌಡರನ್ನು ಜನ ನೋಡಿಲ್ಲವೇ? ಯಾಕೆ ಇವನು ಒಬ್ಬ ಹುಟ್ಟು ಹೋರಾಟಗಾರ. ಈ ಭಾಗದ ಜನರಿಗೆ ನೀರಾವರಿ ಸೇರಿ ಕೆಲಸ ಕೊಟ್ಟಿರುವವನು ನಾನು, ಅದಕ್ಕೆ ಕರೆದಿದ್ದಾರೆ ಎಂದರು.
ನಾನು ಉತ್ತರ ಕರ್ನಾಟಕಕ್ಕೂ ಪ್ರಚಾರಕ್ಕೆ ಹೋಗುತ್ತೇನೆ. ಡಿ.ಕೆ.ಶಿವಕುಮಾರ್ ಬರುತ್ತಾರಂತೆ ಅಬ್ಬಾ… ಇಡೀ ಬೆಂಗಳೂರು ಅವರ ಕೈಯಲ್ಲಿದೆ. ಅವರು ಕಾಂಗ್ರೆಸ್ ಅಧ್ಯಕ್ಷರು ಕಡಿಮೆಯಿಲ್ಲ, ಮಹಾತ್ಮಗಾಂಧಿ ಕಟ್ಟಿದ ಕಾಂಗ್ರೆಸ್‌ನ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಅಬ್ಬಾ.. ಎಂದು ವ್ಯಂಗ್ಯವಾಡಿದ ಅವರು, ನನ್ನ ಅಳಿಯ ಡಾ.ಮಂಜುನಾಥ್ ಎಂದೂ ರಾಜಕೀಯಕ್ಕೆ ಬಂದವರಲ್ಲ. ಹದಿನಾರು ವರ್ಷ ದೊಡ್ಡ ಮಟ್ಟಕ್ಕೆ ಜಯದೇವ ಆಸ್ಪತ್ರೆ ಬೆಳೆಸಿದರು. ಸರ್ಕಾರಿ ವಲಯದಲ್ಲಿ ಎರಡು ಸಾವಿರ ಬೆಡ್ ಆಸ್ಪತ್ರೆ ಇಲ್ಲ, ಟಾಟಾ, ಬಿರ್ಲಾ ಯಾರು ಆಸ್ಪತ್ರೆ ಕಟ್ಟಿಲ್ಲ. ಮಹಾನುಭಾವ ಇಲ್ಲೆ ಚನ್ನರಾಯಪಟ್ಟಣದ ರೈತನ ಮಗ, ಅವರನ್ನು ನರೇಂದ್ರ ಮೋದಿ ಅವರು ನೀವು ಬಿಜೆಪಿಯಿಂದಲೇ ನಿಲ್ಲಬೇಕು ಎಂದು ನಿಲ್ಲಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Veerappa Moily: ಮೋದಿಯನ್ನು ಹಿಟ್ಲರ್, ಸದ್ದಾಂ ಹುಸೇನ್‌ಗೆ ಹೋಲಿಸಿದ ವೀರಪ್ಪ ಮೊಯ್ಲಿ!
ನಮ್ಮ ರಾಜ್ಯದಲ್ಲಿ ಮುಂದಿನ ಬಾರಿ 74 ಹೆಣ್ಣುಮಕ್ಕಳು ಅಸೆಂಬ್ಲಿಗೆ ನಿಲ್ಲಬೇಕು. ಯಾರ ಹಣೆಬರಹ ಏನಿದೆಯೋ ಗೊತ್ತಿಲ್ಲ. ಆ ಬಿಲ್‌ನ್ನು ಪಾಸ್ ಮಾಡಿದ್ದು ನರೇಂದ್ರಮೋದಿಯವರು. ಮೂರು ವರ್ಷ ಕೆಟ್ಟ ಕಾಯಿಲೆಯಿಂದ ಬಳಲಿದೆ, ನನ್ನ ಅಳಿಯ ಡಾ.ಬಲ್ಲಾಳ್ ನನ್ನನ್ನು ಉಳಿಸಿದರು. ಮೋದಿಯವರು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಅಂತ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಏ.26 ರಂದು ಈ ಹತ್ತು ಜಿಲ್ಲೆಯ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಲೋಕಸಭೆಗೆ ಆಯ್ಕೆ ಮಾಡಿ. ಮಂಡ್ಯ, ಮೈಸೂರು, ಚಿಕ್ಕಮಗಳೂರು, ರಾಯಚೂರು ಎಲ್ಲಾ ಕಡೆ ಹೋಗುವೆ. ನಿಮ್ಮ ಶಕ್ತಿಯಿಂದ ಪ್ರಜ್ವಲ್‌ರೇವಣ್ಣ ಅವರು ಅಧಿಕ ಮತಗಳಿಂದ ಗೆಲ್ಲಬೇಕು. ಪ್ರಜ್ವಲ್‌ರೇವಣ್ಣ ಅವರನ್ನು ಕಳುಹಿಸಿಕೊಟ್ಟರೆ ಸಂಸತ್ತಿನಲ್ಲಿ ಮಾತನಾಡಲು ಶಕ್ತಿ ಕೊಟ್ಟಂತೆ ಎಂದು ತಿಳಿಸಿದರು.
ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.