Site icon Vistara News

HD Devegowda Birthday: ಇಂದು ಎ‌ಚ್.ಡಿ ದೇವೇಗೌಡ ಜನ್ಮದಿನ, ಸೋಲಿನ ಕಹಿಯಲ್ಲೂ ಸಂಭ್ರಮ, ಪಕ್ಷ ಕಟ್ಟಲು ಪುಟಿದೇಳಲಿರುವ ದೊಡ್ಡಗೌಡರು

hd devegowda birthday

hd devegowda birthday

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಹಿಯ ನಡುವೆಯೇ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಇಂದು ತಮ್ಮ 91ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ನಡುವೆ, ಮತ್ತೆ ಪಕ್ಷವನ್ನು ತಳದಿಂದ ಕಟ್ಟಲು ರಾಜ್ಯಾದ್ಯಂತ ಸುತ್ತಲು ಹೊರಡಲಿದ್ದಾರೆ.

ಎಚ್‌.ಡಿ ದೇವೇಗೌಡರ (HD Devegowda) ಹುಟ್ಟುಹಬ್ಬಕ್ಕೆ ಜೆಡಿಎಸ್‌ ಭರ್ಜರಿ ಪ್ಲಾನ್ ನಡೆಸಿತ್ತು. ಎಚ್‌.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ದೇವೇಗೌಡರ ಹುಟ್ಟುಹಬ್ಬಕ್ಕೂ ತಯಾರಿ ನಡೆಸಿದ್ದರು. ಜೆಡಿಎಸ್ ಸೋಲಿನಿಂದ ಹುಟ್ಟುಹಬ್ಬದ ಸಂಭ್ರಮ ಕಮರಿದೆ. ಆದರೂ ದೇವೇಗೌಡರ ಹುಟ್ಟುಹಬ್ಬದ ಮೂಲಕ ಹೊಸ ಸಂದೇಶ ರವಾನೆಗೆ ಜೆಡಿಎಸ್ ಚಿಂತಿಸಿದೆ.

ಇಂದು ಮಧ್ಯಾಹ್ನ 1 ಗಂಟೆಗೆ ದೇವೇಗೌಡರ ನಿವಾಸದಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ಹೆಚ್‌ಡಿಡಿ ಕುಟುಂಬ, ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಭಾಗಿಗಳಾಗಲಿದ್ದಾರೆ. ಧಾರ್ಮಿಕ ಪೂಜಾ ಕಾರ್ಯಗಳ ಜೊತೆಗೆ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಹುಟ್ಟುಹಬ್ಬದ ಮೂಲಕ ಸೋಲಿನ ಕಹಿ ಮರೆಯುವ ಪ್ರಯತ್ನದಲ್ಲಿದೆ ಜೆಡಿಎಸ್. ಒಂದು ವಾರದಿಂದ ತೆರೆಮರೆಗೆ ಸರಿದಿದ್ದ ಜೆಡಿಎಸ್ ನಾಯಕರು ಇಂದು ದೇವೇಗೌಡರ ನಿವಾಸದಲ್ಲಿ ಭಾಗಿಯಾಗಲಿದ್ದಾರೆ

ಜೆಡಿಎಸ್ ಕಟ್ಟಲು ಮತ್ತೆ ದೇವೇಗೌಡರ ಪ್ರಯತ್ನ

ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೆ ಅಖಾಡಕ್ಕೆ ಇಳಿಯಲು ದೇವೇಗೌಡರು ವ್ಯೂಹ ಹೆಣೆಯುತ್ತಿದ್ದಾರೆ. ಕಂಗೆಟ್ಟ ಜೆಡಿಎಸ್ ಮರಳಿ ಬೆಳೆಸುವ ಪ್ರಯತ್ನದಲ್ಲಿ 91ರ ಈ ಹಿರಿಯ ನಾಯಕ ಹೋರಾಟ ನಡೆಸಲಿದ್ದಾರೆ. ಮತ್ತೆ ರಾಜ್ಯದ ಮುಂದೆ ಹೋಗಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.

ತಮಿಳು‌ನಾಡು ಸಿಎಂ ಆಗಿದ್ದ ಕರುಣಾನಿಧಿ ಮಾದರಿಯಲ್ಲಿ ವಿಶೇಷ ವಾಹನ ತಯಾರಿಸಿ ರಾಜ್ಯ ಸುತ್ತುವುದು, ರಾಜ್ಯಕ್ಕೆ ತಾವು ನೀಡಿದ ಯೋಜನೆಗಳ ಬಗ್ಗೆ ಮತ್ತೆ ಜನರಿಗೆ ಮಾಹಿತಿ ತಲುಪಿಸಿ ಪ್ರಾದೇಶಿಕ ಪಕ್ಷದ ಅಸ್ಮಿತೆ ಸಾರುವ ಪ್ರಯತ್ನ ಮಾಡುವುದು ದೇವೇಗೌಡರ ಚಿಂತನೆಯಾಗಿದೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು, ಮುಖಂಡರನ್ನು ಸಂಘಟಿಸಲು ಗೌಡರು ನಿರ್ಧರಿಸಿದ್ದಾರೆ. ಆದರೆ ಈಗಷ್ಟೇ ದೇವೇಗೌಡರ ಆರೋಗ್ಯ ಚೇತರಿಕೆ ಹಿನ್ನೆಲೆಯಲ್ಲಿ ಮತ್ತಷ್ಟು ವಿಶ್ರಾಂತಿಯ ಬಳಿಕ ರಾಜ್ಯ ಪ್ರವಾಸ ನಡೆಸುವಂತೆ ಹೆಚ್‌ಡಿಕೆ ಸಲಹೆ ನೀಡಿದ್ದಾರೆ.

ಜೆಡಿಎಸ್‌ಗೆ ಎದುರಾದ 1999ರ ಪರಿಸ್ಥಿತಿ

ಪಕ್ಷಕ್ಕೆ 1999ರಲ್ಲಿ ಉಂಟಾದ ಸ್ಥಿತಿಯನ್ನು ಮತ್ತೆ ಅನುಭವಿಸುತ್ತಿದೆ. ಅಂದು ಜೆಡಿಎಸ್ ಕೇವಲ 10 ಸ್ಥಾನ ಪಡೆದಿತ್ತು. ಆ ಸಂದರ್ಭದಲ್ಲಿ ಜನತಾ ದಳವನ್ನು ಡೆದು ಜನತಾದಳ ಜಾತ್ಯತೀತ ಪಕ್ಷವನ್ನು ಹೆಚ್‌ಡಿಡಿ ಸ್ಥಾಪಿಸಿದ್ದರು. ಜೆಡಿಎಸ್‌ನ ಮೊದಲ ಚುನಾವಣೆಯಲ್ಲಿ ಹೀನಾಯ ಪರಿಸ್ಥಿತಿ ಉಂಡಿದ್ದರು. ಪ್ರಧಾನಿ, ಮುಖ್ಯಮಂತ್ರಿ ಸ್ಥಾನ‌ ಅನುಭವಿಸಿದ್ದರೂ ಪಕ್ಷ ಮಾತ್ರ ರಾಜಕೀಯ ತಳಮಟ್ಟ ತಲುಪಿತ್ತು.

ಅಂಥ ಸಂದರ್ಭದಲ್ಲಿ ಅವರು ಪಕ್ಷವನ್ನು ಸಂಘಟಿಸಿ 2004ರಲ್ಲಿ 58 ಸ್ಥಾನವನ್ನು ಗೆಲ್ಲಿಸಿಕೊಂಡಿದ್ದರು. ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿ ಆಡಳಿತ ನಡೆಸಲು ಸಾಧ್ಯವಾಗಿತ್ತು. ದೇವೇಗೌಡರ ಪಕ್ಷ ಸಂಘಟನೆ ಮತ್ತು ರಾಜಕೀಯ ಲೆಕ್ಕಾಚಾರದಿಂದ ಮತ್ತೆ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಈಗ ಮತ್ತದೇ ಬಗೆಯ ಸಂಘಟನೆಗೆ ಗೌಡರು ಮುಂದಾಗಿದ್ದಾರೆ.

ಇದನ್ನೂ ಓದಿ: HD Devegowda: ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ, ಅವರನ್ನು ಲೋಕಸಭೆಗೆ ನಿಲ್ಲಿಸುತ್ತೇವೆ: ಎಚ್.ಡಿ. ರೇವಣ್ಣ

Exit mobile version