Site icon Vistara News

HD Devegowda: ಮಾಜಿ ಪ್ರಧಾನಿ ದೇವೇಗೌಡರಿಗೆ 91ನೇ ಹುಟ್ಟುಹಬ್ಬದ ಸಂಭ್ರಮ; ಶುಭಾಶಯಗಳ ಮಹಾಪೂರ

HD Devegowda birthday

HD Devegowda birthday

ಬೆಂಗಳೂರು: ಮಾಜಿ ಪ್ರಧಾನಿ, ಹಿರಿಯ ರಾಜಕೀಯ ಮುತ್ಸದ್ದಿ, 91ನೇ ವಯಸ್ಸಿನಲ್ಲೂ ಉತ್ಸಾಹದಿಂದ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಎಚ್‌.ಡಿ ದೇವೇಗೌಡರು (HD Devegowda) ಗುರುವಾರ (ಮೇ 18) ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ಮಧ್ಯಾಹ್ನ 1 ಗಂಟೆಗೆ ಪದ್ಮನಾಭನಗರದ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬದ ಆಚರಣೆ ನಡೆಯಿತು. ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಜೆಪಿ ನಗರದ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ, ರಾಜ್ಯ ಸುಭಿಕ್ಷವಾಗಿ ಇರಲಿ ಎಂದು ಹಾರೈಸಿದರು.

ಒಂದೊಮ್ಮೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಜೆಡಿಎಸ್‌ ನಿರ್ಣಾಯಕ ಸ್ಥಾನದಲ್ಲಿ ಬಂದು ನಿಲ್ಲುತ್ತಿದ್ದರೆ ಮೇ 18ರಂದೇ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭವೂ ಆಯೋಜನೆಯಾಗುವ ಸಾಧ್ಯತೆ ಇತ್ತು. ಆದರೆ, ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಬಂದಿದ್ದರಿಂದ ಅದಕ್ಕೆ ಅವಕಾಶ ದೊರೆತಿಲ್ಲ.

ಹಂಗಾಮಿ ಸಿಎಂ ಬೊಮ್ಮಾಯಿ ಅವರಿಂದ ಭೇಟಿ

ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೂರವಾಣಿ ಮೂಲಕ ಶುಭಾಶಯ ಕೋರಿದ್ದಲ್ಲದೆ, ಪದ್ಮನಾಭನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆರ್. ಅಶೋಕ್, ಗೋವಿಂದ ‌ಕಾರಜೋಳ, ಎಚ್.ಡಿ.ರೇವಣ್ಣ ಹಾಜರಿದ್ದರು.

ಸಿಎಂ ಬೊಮ್ಮಾಯಿ ಮತ್ತು ಇತರರೊಂದಿಗೆ ದೇವೇಗೌಡರ ಉಭಯ ಕುಶಲೋಪರಿ

ದೇವೇಗೌಡರಿಗೆ ಸಿದ್ದರಾಮಯ್ಯ ಅಭಿನಂದನೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಿಯೋಜಿತರಾಗಿರುವ ಸಿದ್ದರಾಮಯ್ಯ ಅವರು ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಅವರು ದೇವೇಗೌಡರು ತಮ್ಮ ಹೆಗಲಿಗೆ ಕೈ ಇಟ್ಟಿರುವ ಚಿತ್ರವೊಂದು ಹಾಕಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ಬದುಕನ್ನು ಹಾರೈಸುತ್ತೇನೆ. ಕನ್ನಡಿಗರ ಹಿತರಕ್ಷಣೆ ಮತ್ತು ನಮ್ಮ ನೆಲ, ಜಲ ಭಾಷೆಗಳ ಹಿತ ಕಾಪಾಡುವಲ್ಲಿ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದ್ದಾರೆ.

ನಿಯೋಜಿತ ಡಿಸಿಎಂ ಡಿ.ಕೆ. ಶಿವಕುಮಾರ್‌ ಶುಭಾಶಯ

ʻʻಮಾಜಿ ಪ್ರಧಾನಿಗಳು, ಹಿರಿಯ ನಾಯಕರಾದ ಎಚ್‌.ಡಿ. ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅವರು ಇಟ್ಟ ಹೆಜ್ಜೆಗಳು ನಮ್ಮಂಥ ನಾಯಕರಿಗೆ ಪ್ರೇರಕ ಶಕ್ತಿಯಾಗಿದೆ. ದೇವರು ಅವರಿಗೆ ಆಯುರಾರೋಗ್ಯ ಪ್ರಾಪ್ತಿ ಮಾಡಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದು ನಿಯೋಜಿತ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಶುಭಾಶಯ

ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಶುಭಾಶಯ ಹೇಳಿದ್ದು, ದೇಶಕ್ಕಾಗಿ ಅವರು ನೀಡಿರುವ ಕೊಡುಗೆ ಗಮನಾರ್ಹ ಎಂದಿದ್ದಾರೆ.

Exit mobile version