ಹಾಸನ: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Devegowda) ಅವರು ಕಣ್ಣೀರು ಹಾಕಿರುವುದು ಕಂಡುಬಂದಿದೆ. ಜಿಲ್ಲೆಯ ಸಕಲೇಶಪುರ ಕಟ್ಟಾಯ ಹೋಬಳಿ ಸತ್ತಿಗರಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ ಎಂದು ದೊಡ್ಡಗೌಡರು ಕಣ್ಣೀರು ಹಾಕಿದ್ದಾರೆ.
ನಾನು ಹನಿ ನೀರಾವರಿ, ಟ್ರ್ಯಾಕ್ಟರ್, ಟಿಲ್ಲರ್‌ಗೆ ಸಬ್ಸಿಡಿ ಕೊಟ್ಟಿದ್ದೆ. ಚಿಕ್ಕಬಳ್ಳಾಪುರ ಸಭೆಯಲ್ಲಿ ನಮ್ಮ ರಾಜ್ಯದ ಕಾವೇರಿ ನೀರನ್ನು ನಮಗೆ ಕೊಡಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳುತ್ತಿದ್ದಾರೆ ಎಂದು ಮೋದಿಗೆ ಹೇಳಿದೆ. ನೀವು ಕೇವಲ ಹಾಸನ ಮಾತ್ರವಲ್ಲ ರಾಜ್ಯದ 28ಕ್ಕೆ 28 ಕ್ಷೇತ್ರ ಗೆಲ್ಲಿಸಬೇಕು, ಅಮೇಲೆ ನೋಡುತ್ತೀನಿ ಎಂದು ಹೇಳಿದರು.
ನಮ್ಮ ಗೌಡ ಬರ್ತಾನೆ ಏನಾದರೂ ಮಾಡುತ್ತಾನೆ ಅಂತ ಇಲ್ಲಿ 20 ಹಳ್ಳಿ ಜನ ಸೇರಿದ್ದೀರಿ. ನನ್ನ ಮನಸ್ಸಲ್ಲಿ ನೋವಿದೆ, ಮೋದಿ ಜೊತೆ ಕೂತು ಪೋಟೋ ತೆಗೆಸಿಕೊಳ್ಳುವುದಲ್ಲ. ನಿಮ್ಮನ್ನು ನೋಡಿದಾಗ ನನಗೆ ತುಂಬಾ ನೋವಿದೆ. ನಿಮ್ಮನ್ನು ಗೆಲ್ಲಿಸುತ್ತೇವೆ ಅಂತ ಬಂದಿರುವ ಪುಣ್ಯಾತ್ಮರು ನೀವು, ನಿಮಗೆ ಸಾಷ್ಟಾಂಗ ನಮಸ್ಕಾರ. ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ. ಮೋದಿಯವರು 400 ಸೀಟು ಪಕ್ಕ ಅಂತಾರೆ, ಅವರು ಪ್ರಧಾನ ಮಂತ್ರಿ ಆಗೋದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.
ಇದನ್ನೂ ಓದಿ | Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್ ಮೊಬೈಲ್‌ನಲ್ಲೇ ಮಾಡಿ!
ಮೋದಿ ಅವರ ಕೈಹಿಡಿದು ಕರೆಸುವ ಶಕ್ತಿ ಇದೆ. ಈ ಭಾಗದಲ್ಲಿ ನೀವು ಬದುಕಲು ಮಾರ್ಗ ಕಲ್ಪಿಸಿ ನನ್ನ ಕೊನೆ ಉಸಿರು ಎಳೆಯಬೇಕು ಅನ್ನೊ ಹಠ ಇದೆ. ನಾನು ಯಾವಾಗಲೋ ಸಾಯಬೇಕಿತ್ತು, ಆದರೆ ಬದುಕಿದೆ. ನನಗೆ ಮೂರು ವರ್ಷ ಕಿಡ್ನಿ ಫೇಲ್ ಆಗಿ ಮಣಿಪಾಲ್ ಆಸ್ಪತ್ರೆ ಲಿ ನನ್ನ ಅಳಿಯ ಡಾ ಮಂಜುನಾಥ್, ಡಾ. ಬಳ್ಳಾಲ್ ಮೂರು ವರ್ಷದಲ್ಲಿ ಬದುಕಿಸಿದರು. ನಿಮ್ಮ ನೋಡೋ ಸೌಭಾಗ್ಯ ಇತ್ತು ಅನಿಸುತ್ತೆ ಎಂದು ದೇವೇಗೌಡರು ಹೇಳಿದರು.
ನೀತಿವಂತ, ಗುಣವಂತ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಿ: ದೇವೇಗೌಡ
ರಾಮನಗರ: ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮೋದಿ ಭರವಸೆ ಕೊಟ್ಟಿದ್ದಾರೆ. ನಾನೂ ಅವರಿಗೆ ಒಂದು ಮಾತು ಕೊಟ್ಟಿದ್ದೇನೆ. ರಾಜ್ಯದಲ್ಲಿ 28 ಸ್ಥಾನ ಗೆದ್ದು ಕೊಡುವ ಮಾತು ಕೊಟ್ಟಿದ್ದೇನೆ. ಅದಕ್ಕಾಗಿ ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ನೀವು 28 ಸ್ಥಾನಗಳನ್ನು ನೀಡಿದ್ರೆ ಮೋದಿ ಕೈಹಿಡಿದು ಮೇಕೆದಾಟಿಗೆ ಸಹಿ ಹಾಕಿಸ್ತೇನೆ. ನೀತಿವಂತ, ಗುಣವಂತ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಿ. ಎಲ್ಲರಿಗೂ ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ. 26ನೇ ತಾರೀಖು ಡಾ.ಮಂಜುನಾಥ್ ಅವರಿಗೆ ಮತಹಾಕಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ಹಾರೋಹಳ್ಳಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಕನಕಪುರ ಹೊಸದಲ್ಲ. ಈ ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದರು. ಮತ್ತೆ ಅದೇ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿ ಆಗಿದ್ದೆ. ನನ್ನನ್ನು ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ. ದೇಶದಲ್ಲಿ ದೇವೇಗೌಡರು ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಡಾ.ಮಂಜುನಾಥ್ ನನ್ನ ಅಳಿಯ ಎನ್ನುವುದಕ್ಕಿಂತ ಜಯದೇವ ಆಸ್ಪತ್ರೆಯಲ್ಲಿ ಅಪಾರ ಸೇವೆ ಮಾಡಿದವರು. ಅವರು ಡೈರೆಕ್ಟರ್ ಆಗಿದ್ದಾಗ ಎ.ಹೆಚ್.ಪಟೇಲ್ ಸಿಎಂ ಆಗಿದ್ರು. ಆಗ ಬಂಧಿಖಾನೆ ಮಂತ್ರಿ ಆಗಿದ್ದ ಈ ಕ್ಷೇತ್ರದ ಮಹಾನುಭಾವ ಅವರ ಮೇಲೆ ತನಿಖೆ ಮಾಡಿಸಿದ್ದ. ಇವರ ಆರೋಗ್ಯ ಸೇವೆ ದೇಶದ ಗಮನ ಸೆಳೆದಿದೆ. ಅದಕ್ಕಾಗಿ ಮೋದಿ, ಅಮಿತ್ ಶಾ ಇವರ ಸೇವೆ ದೇಶಕ್ಕೆ ಬೇಕು ಅಂತ ಆಹ್ವಾನಿಸಿ, ಅವರನ್ನ ಬಿಜೆಪಿಯಿಂದ ನಿಲ್ಲಿಸಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಈಗ ಮಂಜುನಾಥ್ ಎನ್ನುವ ಹೆಸರಿನ ಮೂರು ಜನರನ್ನು ನಿಲ್ಲಿಸಿದ್ದಾರೆ. ಮಹಾನುಭಾವರು ಎಂತಾ ಬುದ್ಧಿ ಬಳಕೆ ಮಾಡಿದ್ದಾರೆ. ಆದರೆ ಡಾ.ಮಂಜುನಾಥ್ ನಂಬರ್ 1 ಡಾಕ್ಟರ್. ಅವರ ಕ್ರಮಸಂಖ್ಯೆ ಕೂಡಾ ನಂಬರ್ ಒನ್. ನರೇಂದ್ರ ಮೋದಿ, ಅಮಿತ್ ಶಾ ಆಯ್ಕೆ ಮಾಡಿರುವ ವ್ಯಕ್ತಿ ಡಾ.ಮಂಜುನಾಥ್. ದೇಶದ ಸೇವೆ ಮಾಡುವ ಅವಕಾಶವನ್ನು ಅವರಿಗೆ ನೀಡಿ ಎಂದು ಹೇಳಿದರು.
ಮನಮೋಹನ್ ಸಿಂಗ್ ಅಧಿಕಾರ ಕಳೆದುಕೊಳ್ಳುವ ಕೊನೇ ಹಂತದಲ್ಲಿ ದೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ಪ್ರಧಾನಿ ಮೋದಿ 10 ವರ್ಷದಲ್ಲಿ ದೇಶ ಅಭಿವೃದ್ಧಿ ಮಾಡಿದ್ದಾರೆ. ಅಂತವರಿಗೆ ಖಾಲಿ ಚೊಂಬು ತೋರಿಸ್ತಾರೆ. ನೀವು ಯಾರಿಗೆ ತೋರಿಡುತ್ತಿದ್ದೀರಿ? ಹುಡುಗಾಟಿಕೆ, ತಮಾಷೆನಾ… ನೀವು ನೀಡಿದ್ದ ಖಾಲಿ ಚೊಂಬನ್ನು ಅವರು ಅಕ್ಷಯ ಪಾತ್ರೆ ಮಾಡವ್ರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ | S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್ ರಾಜಕಾರಣ: ಸಚಿವ ಜೈಶಂಕರ್ ಆರೋಪ
ರಾಜ್ಯದಲ್ಲಿ ಇರೋ ಭ್ರಷ್ಟ ಸರ್ಕಾರವನ್ನು ತೆಗೆಯೋವರೆಗೂ ನಾನು ಕೂರೋದಿಲ್ಲ. ನೀವೆಲ್ಲ ಕೈ ಎತ್ತಿ ಡಾ.ಮಂಜುನಾಥ್ ಗೆಲ್ಲಿಸುತ್ತೇನೆ ಎಂದು ಶಕ್ತಿ ನೀಡಿ. ಡಾ.ಮಂಜುನಾಥ್ ಅತ್ಯಂತ ಅಧಿಕ ಮತಗಳಿಂದ ಗೆಲ್ಲಲು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.