Site icon Vistara News

HD Devegowda: ಮೋದಿ ಬಜೆಟ್‌ಗೆ ಎಚ್‌.ಡಿ.ದೇವೇಗೌಡರ ಮೆಚ್ಚುಗೆ; ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಮನವಿ

HD Devegowda

ನವ ದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಹೃದಯಪೂರ್ವಕವಾಗಿ ಬಜೆಟ್ ಬೆಂಬಲಿಸುತ್ತೇನೆ. ಮುಂದಿನ ಬಜೆಟ್ ಬಗ್ಗೆ ಮಾತಮಾಡುತ್ತೀನೋ, ಇಲ್ಲವೊ ಗೊತ್ತಿಲ್ಲ. ಹೀಗಾಗಿ ಬೆಂಗಳೂರು ನಗರ ಕುಡಿಯುವ ನೀರು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿರುವ ಅವರು, ನಾನು 1991 ರಲ್ಲಿ ಸಂಸತ್‌ಗೆ ಬಂದೆ, ಈಗ ನನಗೆ 92 ವರ್ಷ. ಮುಂದಿನ ಬಜೆಟ್ ಬಗ್ಗೆ ಮಾತಮಾಡುತ್ತೀನೋ, ಇಲ್ಲವೊ ಗೊತ್ತಿಲ್ಲ. ನಾನು ಎನ್‌ಡಿಎ ಭಾಗವಾಗಿದ್ದೇನೆ, ಅದಕ್ಕಾಗಿ ಜೆ.ಪಿ ನಡ್ಡಾ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ನಾನು ಕೃಷಿ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಬದ್ಧತೆ ಇರುವ ವ್ಯಕ್ತಿಯನ್ನು ಕೃಷಿಗೆ ಸಚಿವರನ್ನಾಗಿ ಮಾಡಿದ್ದಾರೆ. ಉತ್ತಮ‌ ಅನುಭವ ಇರುವ ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೋದಿ ಹತ್ತು ವರ್ಷ ಸಿಎಂ ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಹೋಲಿಸಿದರೆ ಗುಜರಾತ್ ಅತ್ಯುತ್ತಮ ಮಾದರಿ ರಾಜ್ಯವಾಗಿದೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರವನ್ನು ನಡೆಸುವುದು ತುಂಬಾ ಕಷ್ಟ. ನಾನೂ ಮೈತ್ರಿ ಸರ್ಕಾರವನ್ನು ನಡೆಸಿದ್ದೇನೆ. ಆದರೆ ನರೇಂದ್ರ ಮೋದಿ ಉತ್ತಮವಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಸ್ಪೀಕರ್ ಆಯ್ಕೆಯಿಂದ ಹಿಡಿದು ಪ್ರಮುಖ ನಿರ್ಧಾರಗಳಲ್ಲಿ ಯಾರು ಆಕ್ಷೇಪ ವ್ಯಕ್ತಪಡಿಸಿಲ್ಲ. ಕರ್ನಾಟಕದಲ್ಲಿ ಎರಡು ಸೀಟು ಮಾತ್ರ ನಮ್ಮ ಶಕ್ತಿ. ಆದಾಗ್ಯೂ ಒಂದು ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.

ಇದು ವೈಜ್ಞಾನಿಕ ಬಜೆಟ್ ಆಗಿದ್ದು, ಮಹಿಳೆಯರು, ಬಡವರು, ಯುವಕರು, ರೈತರ ಪರವಾದ ಬಜೆಟ್ ಅನ್ನು ಕೇಂದ್ರ ಮಂಡಿಸಿದೆ. ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಒತ್ತು ನೀಡಿದೆ, ಹಂಚಿಕೆ ಸರಪಳಿ ಬಲಿಷ್ಠಗೊಳಿಸಲು ಕ್ರಮ ತೆಗೆದುಕೊಂಡಿದೆ. ಯುವಕರಿಗೆ ಇಂರ್ಟರ್ನ್‌ಶಿಪ್‌ನಲ್ಲಿ ಮೊದಲ ತಿಂಗಳ ಸಂಬಳ ನೀಡಲಾಗುತ್ತಿದೆ. ಉದ್ಯೋಗ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡಿದೆ. ಯುವಕರನ್ನು ಕೌಶಲ್ಯಯುತರಾಗಿ ಮಾಡಲು ಹಣ ವ್ಯಯ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ | DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ನಾನು ಯಾರನ್ನು ಟೀಕಿಸಲು ಹೋಗುವುದಿಲ್ಲ, ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಬೆಂಗಳೂರು ಬೆಳೆಯುತ್ತಿರುವ ನಗರ, ಅದಕ್ಕೆ ಕುಡಿಯುವ ನೀರು ಬೇಕು. ಇತ್ತೀಚೆಗೆ ಒಂದು ಟಿಎಂಸಿ ನೀರು ಹರಿಸಲು ಹೇಳಲಾಗಿತ್ತು. ಈಗ ಮಳೆಯಿಂದ ಎಲ್ಲವೂ ಸುಗಮವಾಗಿದೆ, ಸಹಾಯವಾಗಿದೆ. ಮಳೆ ಬಾರದಿದ್ದರೇ ಪರಿಸ್ಥಿತಿ ಏನು ಹೇಳಿ? ನೀರಿನ ಸಮಸ್ಯೆ ಹಿನ್ನೆಲೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಜನರು ಎನ್‌ಡಿಎ ಮೈತ್ರಿಕೂಟ ಬೆಂಬಲಿಸಿದ್ದಾರೆ. ಹಳೆ ಮೈಸೂರು ಭಾಗ ಮತ್ತು ಬೆಂಗಳೂರಿಗೆ ಇದೇ ಆಧಾರ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಒಪ್ಪಿಕೊಂಡಿದೆ. ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.

Exit mobile version