Site icon Vistara News

HD Devegowda in Hospital : ಚೆಕಪ್‌ಗಾಗಿ ಆಸ್ಪತ್ರೆಗೆ ಬಂದಿದ್ದೇನೆ, 2 ದಿನದಲ್ಲಿ ಮನೆಗೆ ಹೋಗ್ತೇನೆ, ಆತಂಕ ಬೇಡ ಎಂದ ಗೌಡ್ರು

HD Devegowda

#image_title

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿರುವುದು (HD Devegowda in Hospital) ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅವರು ಸಹಜವಾದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಅವರ ಆರೋಗ್ಯ ಸ್ಥಿತಿ ಬಗ್ಗೆ ಹಲವಾರು ವದಂತಿಗಳು ಹರಡಿದ್ದವು. ಇದೀಗ ಆ ಎಲ್ಲ ವದಂತಿಗಳಿಗೆ ಸ್ವತಃ ಮಾಜಿ ಪ್ರಧಾನಿಗಳೇ ಟ್ವೀಟ್‌ ಮೂಲಕ ಸಮಾಧಾನ ಹೇಳಿದ್ದಾರೆ. ತಾನು ಆರೋಗ್ಯವಾಗಿದ್ದು, ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದಾಗಿ ಹೇಳಿದ್ದಾರೆ.

ʻʻನಾನು ರುಟೀನ್‌ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಯಾರೂ ಆತಂಕಕ್ಕೊಳಗಾಗುವ, ಗೊಂದಲಕ್ಕೆ ಬೀಳುವ ಅವಶ್ಯಕತೆ ಇಲ್ಲ. ನಾನು ಇನ್ನೊಂದೆರಡು ದಿನದಲ್ಲಿ ಮನೆಗೆ ಮರಳುತ್ತೇನೆʼʼ ಎಂದು ದೇವೇಗೌಡ ಅವರು ಟ್ವೀಟ್‌ ಮಾಡಿದ್ದಾರೆ.

ಸೋಮವಾರದವರೆಗೂ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಭೇಟಿಗೆ ಅವಕಾಶ ನೀಡಲಾಗುತ್ತಿರಲಿಲ್ಲ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅವರ ಭೇಟಿಗೆ ಆಗಮಿಸುತ್ತಿರುವ ಪಕ್ಷದ ನಾಯಕರಿಗೆ, ಮುಖಂಡರಿಗೆ ಕೂಡ ಅವರ ಭೇಟಿ ಸಾಧ್ಯವಾಗುತ್ತಿರಲಿಲ್ಲ. ಸೂಕ್ತ ರೀತಿಯಲ್ಲಿ ಅವರಿಗೆ ಈಗಲೇ ಚಿಕಿತ್ಸೆ ನೀಡಿದರೆ ಒಂದು ತಿಂಗಳಿನಲ್ಲಿ ಅವರ ಆರೋಗ್ಯ ಸುಧಾರಿಸಲಿದ್ದು, ಚುನಾವಣೆಯ ಸಂದರ್ಭದಲ್ಲಿ ಅಂದರೆ ಏಪ್ರಿಲ್‌ನಲ್ಲಿ ಕೆಲವು ಕಡೆ ಚುನಾವಣಾ ಪ್ರಚಾರಕ್ಕೆ ಕಳುಹಿಸಬಹುದಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಲಹೆ ನೀಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದೇವೇಗೌಡರಿಗೆ ವಯೋಸಹಜ ಅನಾರೋಗ್ಯದಿಂದಾಗಿ ಸದ್ಯ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದರೂ ಕುಮಾರಸ್ವಾಮಿಯವರ ರಥಯಾತ್ರೆಯ ಪ್ರತಿಕ್ರಿಯೆ ಬಗ್ಗೆ ಉತ್ಸಾಹದಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಯಾವುದೇ ರಾಜಕೀಯ ಬಿಕ್ಕಟ್ಟಿನ ವಿಷಯವನ್ನು ಅವರ ಗಮನಕ್ಕೆ ತಾರದಂತೆ ಕುಮಾರಸ್ವಾಮಿಯವರು ಅವರ ಕುಟುಂಬದವರಿಗೆ ಸೂಚಿಸಿದ್ದಾರೆನ್ನಲಾಗಿದೆ. ದೇವೇಗೌಡರಿಗೆ ಸಂಪೂರ್ಣ ವಿಶ್ರಾಂತಿ ನೀಡುವುದು ಅವರ ಉದ್ದೇಶವಾಗಿದೆ.

Exit mobile version