ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಮಾಡಿರುವುದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ 1996ರ ಸೆ.12ರಂದು ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಬಿಲ್ (Women Reservation Bill) ಅನ್ನು ಮಂಡಿಸಲಾಗಿತ್ತು. ಆದರೆ, ಇವತ್ತು ಕಾಂಗ್ರೆಸ್‌ನ I.N.D.I.A. ಮೈತ್ರಿಕೂಟ ಸೇರಿಕೊಂಡಿರುವ ನಾಯಕರೇ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, 27 ವರ್ಷಗಳ ನಂತರ ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ನನಗೆ ಸಂತೋಷ ಉಂಟು ಮಾಡಿದೆ. ಈ ಹಿಂದೆ ಸಂಯುಕ್ತರಂಗ ಸರ್ಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಈ ಮಸೂದೆ ಅಂಗೀಕಾರ ಆಗಲಿಲ್ಲ. ಇವತ್ತು ಕಾಂಗ್ರೆಸ್‌ನ I.N.D.I.A. ಮೈತ್ರಿಕೂಟದ ನಾಯಕರೇ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು ಎಂದು ಕಿಡಿಕಾರಿದ್ದಾರೆ.
1995ರಲ್ಲಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿ, ಅಧಿಕಾರ ನಡೆಸುವ ಹಕ್ಕು ಕಲ್ಪಿಸಿ ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಅಂದು ನಮ್ಮ ರಾಜ್ಯದಲ್ಲಿ ಘಟಿಸಿದ ಈ ಕ್ರಾಂತಿಕಾರಿ ವಿದ್ಯಮಾನವನ್ನು ಇಡೀ ದೇಶವೇ ಬೆರಗು ಕಂಗಳಿಂದ ನೋಡಿತ್ತು. ಈಗ ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗುವುದು ಖಚಿತವಾಗಿದ್ದು, ಈ ಮೂಲಕ ಮಾಜಿ ಪ್ರಧಾನಿಗಳ ಕನಸು ನನಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Land Auditing : ಬೆಂಗಳೂರಲ್ಲಿ 75000 ಎಕರೆ ಸರ್ಕಾರಿ ಭೂ ಒತ್ತುವರಿ; ಲ್ಯಾಂಡ್ ಆಡಿಟಿಂಗ್‌ಗೆ ಸಿಎಂ ಸೂಚನೆ
ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸುವುದು ಇಂದಿನ ತುರ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಮತ್ತವರ ಸಂಪುಟ ಕೈಗೊಂಡ ನಿರ್ಧಾರ ಶ್ಲಾಘನೀಯ. ರಾಜಕೀಯಕ್ಕೆ ಅತೀತವಾಗಿ ಈ ಮಸೂದೆಯನ್ನು ಎಲ್ಲಾ ಪಕ್ಷಗಳು ಬೆಂಬಲಿಸಬೇಕು ಎನ್ನುವುದು ನನ್ನ ಮನವಿ ಎಂದು ಹೇಳಿದ್ದಾರೆ.