Site icon Vistara News

ಉತ್ತರ ಕರ್ನಾಟಕದಲ್ಲಿ ಓಟ್‌ ತರುವ ಅಭ್ಯರ್ಥಿಗಳ ಕೊರತೆ ಇದೆ: ಅನ್ಯ ಪಕ್ಷದವರಿಗೆ ಆಹ್ವಾನ ನೀಡಿದ ಎಚ್‌.ಡಿ. ಕುಮಾರಸ್ವಾಮಿ

#image_title

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಜನರು ಜೆಡಿಎಸ್‌ಗೆ ಮತ ನೀಡಲು ಸಿದ್ಧರಾಗಿದ್ದಾರಾದರೂ ಆ ಮತಗಳನ್ನು ತರುವ ಅಭ್ಯರ್ಥಿಗಳ ಕೊರತೆ ಇದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಒಪ್ಪಿಕೊಂಡಿದ್ದು, ಈ ಮೂಲಕ ಬೇರೆ ಪಕ್ಷಗಳ ಅಸಮಾಧಾನಿತರಿಗೆ ಪರೋಕ್ಷ ಆಹ್ವಾನ ನೀಡಿದ್ದಾರೆ. ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳಿಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್‌ ಎರಡನೇ ಪಟಗಟಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ಇವತ್ತು ಇಂದು ಮಂಗಳವಾರ ಆದ್ಧರಿಂದ ಪಟ್ಟಿ ಬಿಡುಗಡೆ ಆಗಿಲ್ಲ. ಬುಧವಾರ ಅಥವಾ ಗುರುವಾರ ಪಟ್ಟಿ ಬಿಡುಗಡೆ ಆಗಬಹುದು.

ದೇವೆಗೌಡ್ರು ನಾಳೆ ಸಂಜೆ ದೆಹಲಿಯಿಂದ ವಾಪಸ್ ಆಗ್ತಾರೆ. ನನಗಿಂತ ನಿಮಗೆ ಹಾಸನ ಟಿಕೆಟ್ ಘೋಷಣೆ ಬಗ್ಗೆ ಕುತೂಹಲವಿದೆ. ಅದನ್ನು ಬಿಟ್ಟು ಮಾಡಿದ್ರೆ ಇನ್ಯಾವುದೋ ಕಥೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಆ ಪಟ್ಟಿಯಲ್ಲಿ ಹಾಸನದ್ದು ಒಳಗೊಂಡಂತೆ ತೀರ್ಮಾನ ಮಾಡಬೇಕು ಎಂದು ಲೆಕ್ಕಾಚಾರವಿದೆ.

ಮೊದಲ ಪಟ್ಟಿ ಬಿಡುಗಡೆಯಾದಗಲೂ ಯಾವುದೇ ಸಮಸ್ಯೆ ಇರಲಿಲ್ಲ, ಎರಡನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ. ಅದಕ್ಕೆ ಹಾಸನ ಜಿಲ್ಲೆ ಬೆಳವಣಿಗೆ ಕಾರಣಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿದ ರಾಜ್ಯದಲ್ಲಿ 2-3 % ಮತಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟೋದಕ್ಕೆ ನಾವು ಯಾವುದೇ ದುಡುಕಿನ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡೋದು ಎಂದರು.

ಕಾಂಗ್ರೆಸ್ ಪಟ್ಟಿ ರಿಲೀಸ್ ಆಗದ ಹಿನ್ನೆಲೆ ಜೆಡಿಎಸ್ ಪಟ್ಟಿ ವಿಳಂಬ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಚಿಂತನೆ ಮಾಡಿಲ್ಲ. ಕೆಲವು ಭಾಗಗಳಲ್ಲಿ ನಾವು ವೀಕ್ ಇದ್ದೇವೆ. ಉತ್ತರ ಕರ್ನಾಟಕದಲ್ಲಿ ಮತ ಹಾಕಲು ಜನ ಸಿದ್ದರಿದ್ದಾರೆ, ಆದರೆ ಮತಗಳಾಗಿ ಪರಿವರ್ತನೆ ಮಾಡೋ ಅಭ್ಯರ್ಥಿಗಳ ಕೊರತೆ ಇದೆ. ಮತ ಆಗಿ ಪರಿವರ್ತನೆ ಮಾಡುವ ನಾಯಕರು ಬಂದಾಗ ಆ ಬಗ್ಗೆ ಚಿಂತನೆ ಮಾಡ್ತೀವಿ. ಕೆಲವೊಂದು ಕ್ಷೇತ್ರದಲ್ಲಿ ಮತವಾಗಿ ಪರಿವರ್ತನೆ ಮಾಡುವ ಶಕ್ತಿಯ ಕೊರತೆ ಇದೆ ಅನ್ನೋದನ್ನ ಒಪ್ಪುತ್ತೇನೆ. ಕಾಂಗ್ರೆಸ್, ಬಿಜೆಪಿ ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ, ನಾನು ಒಪ್ಪುತ್ತೇನೆ ಎಂದರು.

ಬಿಜೆಪಿ, ಕಾಂಗ್ರೆಸ್ ಬೇರೆ ಬೇರೆ ಪಕ್ಷಗಳಿಂದ ಕರೆದುಕೊಂಡು ಬಂದು ಅಭ್ಯರ್ಥಿ ಮಾಡಿದ್ದಾರಲಾ? ನಮಗೆ ಅಭ್ಯರ್ಥಿಗಳು ಇದ್ದಾರೆ ಘೋಷಣೆ ಮಾಡ್ತೀವಿ. ನಮಗೆ ಕೊರತೆ ಇರುವ ಕಡೆ ಬೇರೆ ಪಕ್ಷದ ನಾಯಕರನ್ನು ತೆಗೆದುಕೊಳ್ತೀವಿ ಎಂದರು.

ಜೆಡಿಎಸ್ 100 ಸ್ಥಾನ ಬಂದ್ರೆ ರಾಜೀನಾಮೆ ಕೊಡ್ತೀನಿ ಎಂಬ ಸಚಿವ ಸುಧಾಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೆಚ್ಚು ಕಡಿಮೆ ಆಗಿ ರಾಜಿನಾಮೆ ಕೊಡಬೇಕಾದ ಸಂದರ್ಭ ಬಂದುಬಿಟ್ಟಾತು ಹುಷಾರು. ಆಮೇಲೆ ಎಂಎಲ್‌ಎನೇ ಆಗೋಕಾಗಲ್ವಲ್ಲ? ಅವರು ಮಾಡಿದ ಹಣದ ದಾಹ ಜನರಿಗೆ ಗೊತ್ತಿದೆ. ರೆಫ್ರಿಜಿರೇಟರ್, ಸ್ಟೌವ್ ಎಲ್ಲಾ ಕೊಡ್ತಾ ಇದ್ದಾರೆ. ಇಷ್ಟೆಲ್ಲಾ ಕೊಡ್ತಾ ಇದ್ದಾರೆ, ಇವರು ಇನ್ನೆಷ್ಟು ಶ್ರೀಮಂತರು ಅಂತ ಜನ ಮನೇಲಿ ಕೂರಿಸಿಬಿಟ್ರೆ? ಆ ರೀತಿ ಆದ್ರೆ ಏನು ಮಾಡ್ತಾರೆ, ಅದಕ್ಕೆ ಎಚ್ಚರಿಕೆಯಿಂದ ಇರಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: JDS Politics : ಭವಾನಿ ರೇವಣ್ಣಗೆ ಕೊಡೋದಾದ್ರೆ ನಂಗೂ ಬೇಕು; ಅನಿತಾ ಕುಮಾರಸ್ವಾಮಿ ಹಠ, ಶುಕ್ರವಾರ ಫೈನಲ್‌ ಮ್ಯಾಚ್!‌

Exit mobile version