Site icon Vistara News

ಜೋಳಿಗೆ ಹಿಡಿದ ಮಹಾನುಭಾವ ಎಂದ HDK, ಏ ಪಂಚೆ ಎಂದ ಇಬ್ರಾಹಿಂ: ಬಿ.ಎಲ್‌. ಸಂತೋಷ್‌ ವಿರುದ್ಧ ದಳಪತಿಗಳು ಗರಂ

hd-kumaraswamy-anger-against-bl-santosh

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಣ್ಣೀರು ಸುರಿಸುತ್ತಾ ಜನರ ಮುಂದೆ ಬರುತ್ತಾರೆ ಎಂದಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಜೆಡಿಎಸ್‌ ಕಚೇರಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿ.ಎಲ್‌. ಸಂತೋಷ್‌, ಕೆಲವರು ಕಣ್ಣೀರು ಹಾಕುತ್ತಿದ್ದಾರೆ ಎಂದರೆ ಚುನಾವಣೆ ಬಂದಿದೆ ಎಂದರ್ಥ. ಒಬ್ಬರು ಹೆಂಡತಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದರೆ, ತಾಯಿಯು ಪುತ್ರನಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡುತ್ತಾರೆ ಎಂದು ಜೆಡಿಎಸ್‌ ವಿರುದ್ಧ ಹರಿಹಾಯ್ದಿದ್ದರು.

ಈ ಕುರಿತು ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಜೋಳಿಗೆ ಹಿಡಿದ ಮಹಾನುಭಾವರೊಬ್ಬರು ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ನಿಮಗೂ ಕರ್ನಾಟಕಕ್ಕೂ ಏನು ಸಂಬಂಧ? ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಸಂತೋಷವಾಗಿದ್ದಾರಂತೆ. ಯಾಕೆ ಸಂತೋಷವಾಗಿದ್ದಾರೆ? ಜನರು ಕಣ್ಣೀರಿಡುತ್ತಿರುವುದನ್ನು ನೋಡಿ ಕಂಬನಿ ಮಿಡಿದರೆ ಅದನ್ನು ಅಪಹಾಸ್ಯ ಮಾಡುತ್ತೀರ. ಮಿಸ್ಟರ್‌ ಸಂತೋಷ್‌, ನಿಮ್ಮ ಯೋಗ್ಯತೆ ಇದೇನಾ?

ಇದನ್ನೂ ಓದಿ | ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಹವಾ ಶಕ್ತಿ ಸಂಗಮದಲ್ಲಿ ಮತ್ತೆ ಸಾಬೀತು: ಸಿ.ಟಿ. ರವಿ ಪರ ಬಿ.ಎಲ್‌. ಸಂತೋಷ್‌ ದನಿ

ಜೋಳಿಗೆ ಹಿಡಿದುಕೊಂಡು ಹಣ ಸಂಗ್ರಹಿಸಿದಿರಿ.ಲೂಟಿ ದರೋಡೆ ಮಾಡಿ ಕರ್ನಾಟಕ ಹಣವನ್ನ ಕೊಂಡೊಯ್ದಿದ್ದೀರಾ. ಸಂತೋಷವಾಗಿದ್ದೀರಂತೆ ಲೂಟಿ ಹೊಡೆದು. ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಅಪರೇಶನ್ ಕಮಲ ಮಾಡಿ ನಮ್ಮ‌ ಸರ್ಕಾರ ತೆಗೆದಿರಿ. ಕರ್ನಾಟಕದಂತೆಯೇ ತೆಲಂಗಾಣದಲ್ಲಿ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದೀರಿ. ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತೀರಲ್ಲ, ಬೆಳಗಾವಿಯಲ್ಲಿ ಸಂಸದರು ನಿಧನರಾದಾಗ ಅಲ್ಲೇನು ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟಿರ? ಶಿಕಾರಿಪುರದಲ್ಲಿ ಯಡಿಯೂರಪ್ಪ ಬದಲಿಗೆ ಬೇರೆ ಕಾರ್ಯಕರ್ತರಿಗೆ ನೀಡುತ್ತಿದ್ದೀರ? ನಿಮ್ಮಿಂದ ನಾನು ತ್ಯಾಗವನ್ನು ಕಲಿಯಬೇಕ? ನಿಮ್ಮ ಪಕ್ಷದೊಳಗೆ ಏನೇನು ಆಗುತ್ತಿದೆ ಎಂದು ಹೇಳಬೇಕ? ನಿಮ್ಮ ರೀತಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. ಜನರ ನಡುವೆ ಇದ್ದು ಹೋರಾಟ ಮಾಡುತ್ತಿದ್ದೇನೆ. ದೇಶ ಲೂಟಿ ಹೊಡೆದು, ಅಪಾಮಾರ್ಗದಲ್ಲಿ ಹಣ ಸಂಗ್ರಹಿಸಿ ದೇಶ ಒಡೆಯುತ್ತಿದ್ದೀರ. ನಿಮ್ಮಿಂದ ತ್ಯಾಗ ಮನೋಭಾವ ಕಲಿಯಬೇಕಿಲ್ಲ. ನಮ್ಮ ಮನೆಯ ಬಳಿ ಕಷ್ಟಗಳನ್ನು ಹೇಳಿಕೊಂಡು ಬರುತ್ತಾರಲ್ಲ, ಅವರಿಗಾಗಿ ಕಣ್ಣಲ್ಲಿ ನೀರು ಹಾಕುತ್ತಿದ್ದೇವೆ. ಮೂರು ವರ್ಷದ ಸರ್ಕಾರದಲ್ಲಿ ಲೂಟಿ ಹೊಡೆದಿದ್ದೀರ.

ನನ್ನ ಪಕ್ಷದ ಬಗ್ಗೆ ಚರ್ಚೆ ಮಾಡುವ ಯೋಗ್ಯತೆ, ನೈತಿಕತೆ ನಿಮಗೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ಮಾಡಿಕೊಂಡಿದ್ದೀರ. ನಾವು ಜನರ ಮಧ್ಯದಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರಾಜೀನಾಮೆ ನೀಡಿ ಹೊರಬನ್ನಿ, ನಮ್ಮ ಜತೆ ಸರ್ಕಾರ ಮಾಡಿ ಎಂದು ನಿಮ್ಮ ಪ್ರಧಾನಮಂತ್ರಿ ಯಾಕೆ ಆಹ್ವಾನ ಕೊಟ್ಟಿದ್ದರು? ನಮ್ಮ ಕುಟುಂಬದ ಬಗ್ಗೆ ಅವರು ಹೇಳ್ತಾರೆ ಕೇಳಿ.

ಮಿಸ್ಟರ್‌ ಸಂತೋಷ್‌, ಮಿಸ್ಟರ್‌ ಅಶೋಕ್‌, 2023ರ ಚುನಾವಣೆ ನಂತರ ಜನತಾದಳ ಹತ್ತಿರಕ್ಕೇ ಬರಬೇಕು. ಅಷ್ಟು ಸುಲಭವಾಗಿ ಬಿಜೆಪಿ ಉಳಿಯಲು ಸಾಧ್ಯವಿಲ್ಲ. ಈ ರಾಜ್ಯದಿಂದ ಬಿಜೆಪಿಯನ್ನು ಹೊರಹಾಕಲು ತೀರ್ಮಾನ ತೆಗೆದುಕೊಂಡಿದ್ದೇನೆ. ಇವರು ದರೋಡೆಕೋರರು. ಇವರ ಜತೆ ಸರ್ಕಾರ ನಡೆಸಲು ಆಗುವುದಿಲ್ಲ. ಪಂಚರತ್ನ ಜಾರಿಗೆ ತರಲು ಆಗುವುದಿಲ್ಲ. ಅವರಿಗೆ ಜನರ ಕಷ್ಟ ಗೊತ್ತಿಲ್ಲ ಎಂದು ಹರಿಹಾಯ್ದರು.

ಬಿ.ಎಲ್‌. ಸಂತೋಷ್‌ ಅವರನ್ನು ʼಏ ಪಂಚೆʼ ಎಂದ ಸಿ.ಎಂ. ಇಬ್ರಾಹಿಂ, 12 ಮಂತ್ರಿಗಳು ವಿಡಿಯೋ ಸ್ಟೇ ತಂದು ಕೂತಿದ್ದಾರಲ್ಲ, ಯಾರು ಇವರು? ಅವರ ವಿಡಿಯೋ ನೋಡಿ ಸಂತೋಷವಾಗಿದ್ದೀಯೋ? ವಿಡಿಯೋಕ್ಕೆ ಸ್ಟೇ ಸಿಕ್ಕಿದೆ ಎಂದು ಸಂತೋಷವಾಗಿದ್ದೀಯೊ? ಜನರ ಕಷ್ಟಕ್ಕೆ ಕಣ್ಣೀರು ಹಾಕಿದರೆ ಆಡಿಕೊಳ್ಳುತ್ತೀರ? ಜೋಳಿಗೆ ಹಿಡಿದುಕೊಂಡು ಹಣ ಕೊಟ್ಟು ಸರ್ಕಾರ ರಚನೆ ಮಾಡಿದಿರಿ. ಈಗ ಅಶ್ವಮೇಧ ಯಾಗದ ಕುದುರೆಗಳನ್ನು ಬಿಟ್ಟಿದ್ದೇವೆ. ಅಲ್ಲಿಯೇ ತೀರ್ಮಾನ ಆಗುತ್ತದೆ ಎಂದರು.

ಇದನ್ನೂ ಓದಿ | ಬಿಜೆಪಿ ಶಕ್ತಿ ಸಂಗಮ | ಸಿದ್ದರಾಮಯ್ಯ ವಿರುದ್ಧ ಯದ್ವಾತದ್ವಾ ವಾಗ್ದಾಳಿ ನಡೆಸಿದ ಸಿ.ಟಿ. ರವಿ, ಬಿ.ಎಲ್‌. ಸಂತೋಷ್‌

Exit mobile version