ಮಂಗಳೂರು: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಶನಿವಾರ ರಾತ್ರಿ ಭಾಗವಹಿಸಿ, ಹೊನಲು ಬೆಳಕಿನಲ್ಲಿ ಮಕ್ಕಳ ಸಾಹಸ ಪ್ರದರ್ಶನವನ್ನು ವೀಕ್ಷಿಸಿದರು. ಬಿಜೆಪಿಯ ಪ್ರಮುಖ ನಾಯಕರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಕ್ಕಳಿಂದ ಸಾಹಸ ಕ್ರೀಡೆಗಳ ಜತೆ ದೇಶ ಪ್ರೇಮದ ಸಂದೇಶ ಸಾರಿದ್ದು ಗಮನ ಸೆಳೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ರಾಮ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವದಲ್ಲಿ ರಾಷ್ಟ್ರ ಭಕ್ತಿಯ ಜತೆಗೆ ರಾಮ ಭಕ್ತಿಯ ಅನಾವರಣವಾಯಿತು. ನಂತರ ಒಂದೇ ಮಾತರಂ ಘೋಷಣೆಗಳು ಮೊಳಗಿದವು. ಈ ವೇಳೆ ಮೋದಿ ಗೆಟಪ್‌ನಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿ, ಚಂದ್ರಯಾನ 3 ಉಡಾವಣೆ ಮರುಸೃಷ್ಟಿ ಗಮನ ಸೆಳೆಯಿತು. ನಂತರ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗೆ ಪುಷ್ಪ ನಮನ ಸಲ್ಲಿಸಲಾಯಿತು.
ಮಕ್ಕಳ ಸಾಹಸ ಹಾಗೂ ನೃತ್ಯ ವೀಕ್ಷಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಕ್ರೀಡೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಪ್ರಭಾಕರ ಭಟ್ ಅವರ ಗುಣಗಾನ ಮಾಡಿದರು. ಪ್ರಭಾಕರ್ ಭಟ್ ಅವರ ಬಗ್ಗೆ ನನಗೆ ಈ ಹಿಂದೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇಂದು ಇಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಉತ್ತಮ ಶಿಕ್ಷಣ ನೀಡುವಲ್ಲಿ ಭಟ್ ಅವರ ಕೊಡುಗೆ ಸ್ಮರಿಸಬೇಕು. ಇಂತಹ ಕಾರ್ಯಕ್ರಮ ಮಾಡಲು ಸುಲಭವಲ್ಲ. ಅದೇ ರೀತಿ ಈ ಶಾಲೆ ಕಟ್ಟಿರುವುದು ಸಾಮಾನ್ಯ ವಿಚಾರವಲ್ಲ. ಜ್ಞಾನ ವಿಕಾಸದ ಜತೆ ಎಲ್ಲಾ ರೀತಿಯ ವಿಕಾಸ ಇಲ್ಲಿ ಆಗುತ್ತಿದೆ. ಪ್ರಭಾಕರ್ ಭಟ್ ಇಂದು ನನ್ನ ಕಣ್ಣು ತೆರೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | JDS Karnataka: ಪಕ್ಷ ವಿರೋಧಿ ಚಟುವಟಿಕೆ; ಸಿ.ಎಂ.ಇಬ್ರಾಹಿಂ, ಕೇರಳದ ಸಿ.ಕೆ. ನಾನು ಉಚ್ಚಾಟನೆ
ನಮ್ಮ ಶಾಲಾ ದಿನಗಳಲ್ಲಿ ಮಾಡುತ್ತಿದ್ದ ರಾಮ ಭಜನೆ ಮತ್ತೆ ನೆನಪಿಸಿದ್ದಾರೆ. ಸರ್ಕಾರಕ್ಕೆ ಕಣ್ಣು ತೆರೆಸುವ ರೀತಿಯಲ್ಲಿ ಅವರು ಶಾಲೆ ನಡೆಸುತ್ತಿದ್ದಾರೆ. ನಾನು ಈ ಹಿಂದೆ ಅವರ ಬಗ್ಗೆ ಮಾಡಿದ್ದ ಟೀಕೆ ಬೇರೆ, ಈಗಿನ ಹೊಗಳಿಕೆ ಬೇರೆ. ಇಲ್ಲಿಗೆ ಬಂದ ಮೇಲೆ ನನಗೆ ನಿಜ ವಿಚಾರ ಗೊತ್ತಾಗಿದೆ. ಅಂದು ದಾರಿ ತಪ್ಪಿದ್ದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪುತ್ತೇನೆ. ಕೆಲವರು ನನ್ನ ದಾರಿ ತಪ್ಪಿಸಿದ್ದ ಕಾರಣ ಕೆಲ ಹೇಳಿಕೆ ನೀಡಿದ್ದೆ ಎಂದು ತಿಳಿಸಿದರು.