ಬೆಂಗಳೂರು: ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ (Reservation) ನೀತಿಯಲ್ಲಿ ಮುಸ್ಲಿಮರೂ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇದ್ದ ಶೇ. 4 ಮೀಸಲಾತಿಯನ್ನು ರದ್ದು ಮಾಡಿರುವುದು ಅವೈಜ್ಞಾನಿಕ ಮತ್ತು ಸಮಾಜವನ್ನು ಒಡೆಯುವ ಕೆಲಸ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಸುದ್ದಿಗಾರರ ಜತೆ ಮಾತನಾಡಿ, ಮುಸ್ಲಿಮರಿಗೆ 2ಬಿ ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ ಹಂಚಿರುವುದು ಅತ್ಯಂತ ಅವೈಜ್ಞಾನಿಕ. ಇದು ಸಮಾಜವನ್ನು ಒಡೆಯುವ ಪ್ರಯತ್ನ ಎಂದು ಹೇಳಿದರು.
ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ತೆಗೆದಿರುವುದು ಅವೈಜ್ಞಾನಿಕ ಅಷ್ಟೆ. ಮುಸ್ಲಿಂ ಸಮಾಜದಲ್ಲೂ ಬಡವರು ಇದ್ದಾರೆ. ಅವರು ಮೇಲ್ವರ್ಗದ ಬಡವರಿಗಾಗಿ ಇರುವ ಇಡಬ್ಲ್ಯುಎಸ್‌ನಲ್ಲಿ ಹೇಗೆ ಸ್ಪರ್ಧೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಲಕ್ಷಾಂತರ ಹಣ ಪಡೆದು ನೇಮಕಾತಿ ಮಾಡಲಾಗುತ್ತಿದೆ. ಬಡವರಿಗೆ ಉದ್ಯೋಗ ಸಿಗಲ್ಲ ಎಂದು ಹೇಳಿದರು.
ʻʻಇದೊಂದು ಘೋಷಣೆ ಅಷ್ಟೆ, ಚುನಾವಣೆ ಘೋಷಣೆ ಆದ ನಂತರ ಏನೂ ಆಗಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಕಾನೂನಾತ್ಮಕವಾಗಿ ಏನಾಗಲಿದೆ ಎಂದು ನೋಡಬೇಕು. ಮುಂದೆ ಯಾರ್ಯಾರು ಕೋರ್ಟ್‌ಗೆ ಹೋಗ್ತಾರೆ, ಅಲ್ಲಿ ಏನು ಮಾಡ್ತಾರೆ ನೋಡಬೇಕುʼʼ ಎಂದು ಹೇಳಿದರು.
ಒಳ ಮೀಸಲಾತಿ ತಂದಿರುವುದು ಕೂಡಾ ಆಯಾಯ ಸಮಾಜ ಖುಷಿಪಡಿಸಲಿಕ್ಕೆ ಅಷ್ಟೆ. ಅವರು ಇಷ್ಟು ದಿನ ಏನು ಮಾಡುತ್ತಿದ್ದರು? ಈಗ ಚುನಾವಣೆ ಕಾಲಕ್ಕೆ ಎಲ್ಲವೂ ನೆನಪಾಯಿತಾ ಎಂದು ಎಚ್.ಡಿ.ಕೆ ಪ್ರಶ್ನಿಸಿದರು. ಹಣ ಕೊಡುವವರಿಗಷ್ಟೇ ಕೆಲಸ ಸಿಕ್ಕಾಗ ಮೀಸಲಾತಿ ತಗೊಂಡು ಏನ್ ಮಾಡ್ತೀರಾ ಎಂದೂ ಅವರು ಕೇಳಿದರು.
ರಾಹುಲ್ ಗಾಂಧಿ ಅನರ್ಹತೆ ವಿಚಾರ
ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು ಸಂವಿಧಾನವಿರೋಧಿ ನಿಲುವು ಎಂದು ಅವರು ಹೇಳಿದರು. ಬಿಜೆಪಿಯವರು ಏನೆಲ್ಲಾ ಪದ ಬಳಕೆ ಮಾಡಿದ್ದಾರೆ. ಉರಿಗೌಡ ನಂಜೇಗೌಡ ಟಿಪ್ಪುನ ಹೇಗೆ ಕೊಂದ್ರು ಹಾಗೆ ಸಿದ್ದರಾಮಯ್ಯ ಅವರನ್ನ ಕೊಲ್ಲಬೇಕು ಎಂದು ಒಬ್ಬರು ಸಚಿವರು ಹೇಳಿದರು. ಆದರೆ, ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಆದರೆ, ಆದರೆ ಹಿಂದೆ ಯಾವಾಗಲೋ ಕೋಲಾರದಲ್ಲಿ ಮಾತನಾಡಿದ್ದನ್ನು ಸೂರತ್‌ನಲ್ಲಿ ಕಂಪ್ಲೇಂಟ್ ಕೊಡಿಸಿದ್ದಾರೆ. ಕೋರ್ಟ್ ತೀರ್ಪಿನ ಪ್ರತಿಯೇ ಸಿಕ್ಕಿಲ್ಲ. ಆಗಲೇ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ. ತರಾತುರಿಯಲ್ಲಿ ಮಾಡಿರುವ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಅನುಭವಿಸುತ್ತಾರೆ ಎಂದು ಹೇಳಿದರು ಎಚ್.ಡಿ ಕುಮಾರಸ್ವಾಮಿ.
ಪಂಚರತ್ನ ಯಾತ್ರೆ ಅದ್ಧೂರಿ ಸಮಾರೋಪ
ಮೈಸೂರಿನಲ್ಲಿ ಪಂಚರತ್ನ ಸಮಾರೋಪ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮಕ್ಕೆ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದಿಂದಲೂ ಬರಲಿದ್ದಾರೆ. ಹತ್ತು ಸಾವಿರ ಬಸ್‌ಗಳನ್ನು ಇದಕ್ಕಾಗಿ ನಿಗದಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ. ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಡೆಯಲಿದೆ. ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮ ಯಶಸ್ಸು ಕಾಣುತ್ತದೆ ಎಂದು ಕುಮಾರಸ್ವಾಮಿ ಆಶಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಜತೆಗಿನ ಭೇಟಿಯ ಬಗ್ಗೆ ವಿವರಣೆ ನೀಡಿದ ಅವರು, ದೇಶ, ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಮಾತನಾಡಿದ್ದೇವೆ. ಮುಂದಿನ ಚುನಾವಣೆ ಬಗ್ಗೆಯೂ ಚರ್ಚೆ ಆಗಿದೆ. ವಿರೋಧ ಪಕ್ಷಗಳು ಯಾವ ರೀತಿ ಹೋರಾಟ ಮಾಡುವ ಬಗ್ಗೆಯೂ ಚರ್ಚೆ ಆಗಿದೆ. ಅವರು ಕೆಲವು ಸಭೆಗಳಲ್ಲಿ ಭಾಗಿಯಾಗುವ ಇಚ್ಛೆ ಹೊಂದಿದ್ದಾರೆ ಎಂದರು ಎಚ್.ಡಿ ಕುಮಾರಸ್ವಾಮಿ.
ಇದನ್ನೂ ಓದಿ Prashant Sambargi : ರಾಹುಲ್ ಗಾಂಧಿ ಟೀಕಿಸುವ ಭರದಲ್ಲಿ ದೇವೇಗೌಡರಿಗೆ ಅಪಮಾನ ಮಾಡಿದ ಪ್ರಶಾಂತ್ ಸಂಬರ್ಗಿ!