ತುಮಕೂರು: ಕೇಂದ್ರದಲ್ಲಿ ಕೊಬ್ಬರಿ ಬೆಂಬ ಬೆಲೆ ನಿರ್ಧಾರಕ್ಕೆ ಮೂರು ನಿಯಮ ಇದೆ. ನನಗೆ ಎರಡ್ಮೂರು ತಿಂಗಳು ಸಮಯ ಕೊಡಿ, ಕೊಬ್ಬರಿಗೆ (ಕ್ವಿಂಟಾಲ್) ಕನಿಷ್ಠ 16-18 ಸಾವಿರ ಬೆಂಬಲ ಬೆಲೆ ಕೊಡಿಸಿದಾಗಲೇ ನನಗೆ ಸಮಾಧಾನ. ರೈತರು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳೋದು ಹೆಚ್ಚಾಗಿದೆ. ರೈತರನ್ನು ಹೇಗೆ ಉಳಿಸಬೇಕು ಎಂಬುವುದೇ ನನ್ನ ಯೋಚನೆ. ನಾನು ಕೃಷಿ ಸಚಿವ ಅಲ್ಲದೇ ಇರಬಹುದು, ಎರಡ್ಮೂರು ತಿಂಗಳಲ್ಲಿ ಬೇರೆ ಇಲಾಖೆಯವರು ಪರಿಚಯ ಆಗುತ್ತಾರೆ. ಆಗ ರಾಜ್ಯದ ರೈತರಿಗೆ ಅನುಕೂಲ ಆಗುವ ಕಾರ್ಯಕ್ರಮ ತರುತ್ತೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಭರವಸೆ ನೀಡಿದರು.
ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಕೇಂದ್ರದಲ್ಲಿ ಎರಡು ದೊಡ್ಡ ಖಾತೆ ಕೊಟ್ಟಿದ್ದಾರೆ. ಎರಡೂ ತುಂಬಾ ಸೂಕ್ಷ್ಮವಾದ ಖಾತೆಗಳು. ನಾನು ಸೂಕ್ತವಾಗಿ ಕೆಲಸ ಮಾಡಿದರೆ ದೇಶದ ಆರ್ಥಿಕ ಸುಧಾರಣೆ, ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ. ನಾನು ವಿಶ್ರಾಂತಿ ತೆಗೆದುಕೊಳ್ಳದೇ ಸುತ್ತಾಡುತಿದ್ದೇನೆ. ಆದರೆ, ಅಭಿಮಾನಿಗಳನ್ನು ನೋಡಿ ನನ್ನ ಆಯಾಸ ಮರೆಯಾಗುತ್ತದೆ ಎಂದು ಹೇಳಿದರು.
ನಾನು ನನ್ನ ಇಲಾಖೆ ಕುರಿತು ಅಧ್ಯಯನ ಮಾಡಬೇಕಾಗಿದೆ. ನಾನು ಕೊನೇ ಬೆಂಚ್ ವಿದ್ಯಾರ್ಥಿ ಆಗಿದ್ದೆ. ಸರಿಯಾಗಿ ಓದಿರಲಿಲ್ಲ, ಈಗ ಇಲಾಖೆ ಬಗ್ಗೆ ಓದಿ, ತಿಳಿದುಕೊಳ್ಳಬೇಕಾಗಿದೆ. ನಾನು ನನ್ನ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ರಾಜಕಾರಣಿಯಾಗಿಲ್ಲ. ನಿಖಿಲ್ ಕುಮಾರಸ್ವಾಮಿ ನನ್ನ ಹೆಸರು ಎಲ್ಲೂ ದುರುಪಯೋಗಪಡಿಸಿಕೊಂಡಿಲ್ಲ. ನನ್ನಪ್ಪ ನನಗೆ ಆಸ್ತಿ ಮಾಡಿ ಇಟ್ಟಿಲ್ಲ ಎಂದು ಎಂದೂ ಕೇಳಿಲ್ಲ. 2006 ಮೊದಲ ಇನ್ಸಿಂಗ್ಸ್, ಈಗ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದೇನೆ ಎಂದು ಹೇಳಿದರು.
ರಾಜ್ಯದ ತೆರಿಗೆ ಹಣ ಕಾಂಗ್ರೆಸ್ ಸ್ವೇಚ್ಛಾಚಾರ ಮಾಡಿಕೊಂಡು ದುರುಪಯೋಗ ಮಾಡುತ್ತಿದೆ. ತಮ್ಮ ಕಾರ್ಯಕರ್ತರನ್ನು ಬೋರ್ಡ್ ಚೇರ್ಮನ್ ಮಾಡಿ ದುಂದು ವೆಚ್ಚ ಮಾಡುತ್ತಿದೆ. ಕರ್ನಾಟಕ ಅತ್ಯಂತ ಸಂಪದ್ಭರಿತ ರಾಜ್ಯ ಆದರೂ ತೈಲ ಬೆಲೆ ಏರಿಕೆ ಮಾಡಿದ್ದಾರೆ. ನಾನು ರಾಜ್ಯದ ರೈತರ ಸಾಲಮನ್ನಾ ಮಾಡಲು ನಿರ್ಧಾರ ಮಾಡಿದ್ದೆ. ಆಗ ಪೆಟ್ರೋಲ್ ಬೆಲೆ ಹೆಚ್ಚಿಸಲು ಉದ್ದೇಶಿಸಿದೆ, ಆದರೆ ಅನುಷ್ಠಾನಕ್ಕೆ ಬಂದಿರಲಿಲ್ಲ. ಸಿಎಂ ಸಿದ್ದರಾಮಯ್ಯ ನಾನು ತೈಲ ಬೆಲೆ ಏರಿಕೆ ಮಾಡಿದ್ದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Petrol Diesel Price Hike: ಬಡವರ ಮೇಲೆ ತೆರಿಗೆ ಹಾಕಿ ಬೇರೆ ರಾಜ್ಯಗಳಿಗೆ ಹೋಲಿಸುವುದು ದ್ರೋಹ: ಬೊಮ್ಮಾಯಿ ಆಕ್ರೋಶ
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಹಣ ಕೊರತೆ ಉಂಟಾಗಿದೆ. ಹಾಗಾಗಿ ತೈಲ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಕೊಟ್ಟಿದ್ದು ತಪ್ಪು ಎಂದು ನಾನು ಹೇಳಿಲ್ಲ, ಖಜಾನೆ ಹೇಗೆ ಖಾಲಿ ಆಯ್ತು ಎಂದು ಪ್ರಶ್ನೆ ಮಾಡುತ್ತೇನೆ. ವಾಲ್ಮೀಕಿ ನಿಗಮದಲ್ಲಿನ 180 ಕೋಟಿ ಹಣದಲ್ಲಿ 82 ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದಾರೆ. ಈ ರೀತಿ ಲೂಟಿ ಮಾಡದೇ ಇದ್ದರೆ ಪೆಟ್ರೋಲ್ ಬೆಲೆ ಹೆಚ್ಚಿಗೆ ಮಾಡೋ ಪ್ರಮೇಯ ಬರುತ್ತಿರಲಿಲ್ಲ. ವರ್ಷಕ್ಕೆ 500 ಕೋಟಿ ಸೆಸ್‌ನಿಂದ ಸಂಗ್ರಹ ಆಗಬಹುದು, ಇಷ್ಟು ಹಣಕ್ಕಾಗಿ ಬೆಲೆ ಹೆಚ್ಚಳ ಮಾಡಬೇಕಿತ್ತಾ? ಬೋರ್ಡ್ ಚೇರ್ಮನ್ ನೇಮಕ ವಿಳಂಬ ಮಾಡಿದ್ದಿದ್ದರೆ ಏನಾಗುತ್ತಿತ್ತು. ಅವರಿಗೆ ಗೂಟದ ಕಾರು ಕೊಟ್ಟು ದುಂದು ವೆಚ್ಚ ನಿಲ್ಲಿಸಿದ್ದರೆ ಏನಾಗ್ತಿತ್ತು, ಕಾಡು ಗೊಲ್ಲರನ್ನು ಎಸ್ಟಿಗೆ ಸೇರಿಸುವ ನನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದು ಹೇಳಿದರು.