Site icon Vistara News

HD Kumaraswamy : ಆಸ್ಪತ್ರೆ ತಲುಪಿದಾಗ ತೊದಲುತ್ತಿದ್ದರು, ಕೈನಲ್ಲಿ ವೀಕ್ನೆಸ್‌ ಇತ್ತು; ಈಗ ಹೇಗಿದ್ದಾರೆ ಕುಮಾರಸ್ವಾಮಿ?

HDK hospitalized

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.‌ಡಿ ಕುಮಾರಸ್ವಾಮಿ (HD Kumaraswamy) ಅವರು ಬುಧವಾರ ನಸುಕಿನ ಜಾವ ಏಕಾಏಕಿ ಅಸ್ವಸ್ಥರಾಗಿದ್ದು, (HD Kumaraswamy hospitalized) ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಒಂದೆರಡು ದಿನದಲ್ಲಿ ಅವರು ಎಂದಿನಂತೆ ಕೆಲಸ ಶುರು ಮಾಡಬಹುದು ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಗೆ ಬಂದಾಗ ಹೇಗಿದ್ದರು ಕುಮಾರಸ್ವಾಮಿ?

ಮಾಜಿ ಸಿಎಂ ಕುಮಾರಸ್ವಾಮಿ ಅವರರನ್ನು ಬೆಳಗ್ಗೆ 3 ಗಂಟೆ ಸುಮಾರಿಗೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅವರು ಬಂದಾಗ ಮಾತಿನಲ್ಲಿ ತೊದಲು ಇತ್ತು, ಕೈನಲ್ಲಿ ವೀಕ್ನೆಸ್ ಇತ್ತು. ಈ ಕಾರಣಕ್ಕಾಗಿಯೇ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ಎಚ್‌ಡಿಕೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಸತೀಶ್‌ ಚಂದ್ರ ಅವರು ಹೇಳಿದ್ದಾರೆ.

ಅವರನ್ನು ಮನೆಯವರು ವಿಂಡೋ ಪಿರಿಯಡ್ ಅಂತ ಇರುವ ಅವಧಿಯಲ್ಲಿ ಕರೆದುಕೊಂಡು ಬಂದರು. ಅವರನ್ನು ತಕ್ಷಣವೇ ತಪಾಸಣೆ ನಡೆಸಲಾಯಿತು. ಎಂಆರ್‌ಐ ಸ್ಕ್ಯಾನ್ ಮಾಡಿ ತಕ್ಷಣವೇ ಚಿಕಿತ್ಸೆಯನ್ನು ನೀಡಿದೆವು. ತಕ್ಷಣವೇ ಚಿಕಿತ್ಸೆ ನೀಡಿರುವುದರಿಂದ ಗುಣಮುಖರಾಗಿದ್ದಾರೆ ಎಂದು ಡಾ. ಸತೀಶ್ ಚಂದ್ರ ಹೇಳಿದ್ದಾರೆ.

ಮನೆಯವರು ವಿಂಡೋ ಪೀರಿಯೆಡ್‌ನಲ್ಲೇ ಬಂದು ಚಿಕಿತ್ಸೆ ನೀಡಿದ್ದರಿಂದ ಯಾವುದೇ ಅಪಾಯ ಆಗಲಿಲ್ಲ ಎನ್ನುವುದು ವೈದ್ಯರ ಅಭಿಪ್ರಾಯ.

ಕುಮಾರಸ್ವಾಮಿ ಅವರು ಒಂದೇ ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ. ಚೆನ್ನಾಗಿ ಮಾತನಾಡುತ್ತಿದ್ದಾರೆ. ಕುಳಿತುಕೊಂಡು ಪೇಪರ್‌ ಓದಿದ್ದಾರೆ. ಅವರ ಮಾತು ಸರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದು ಹೃದಯದ ಸಮಸ್ಯೆ ಅಲ್ಲ

ಕುಮಾರಸ್ವಾಮಿ ಅವರಿಗೆ ಈ ಬಾರಿ ಹೃದಯದ ಸಮಸ್ಯೆ ಆಗಿದ್ದಲ್ಲ. ಹೃದಯಕ್ಕೆ ಯಾವುದೇ ತೊಂದರೆ ಇಲ್ಲ. ರಕ್ತ ಪರಿಚಲನೆ ಕಡಿಮೆ ಆಗಿ ವೀಕ್ನೆಸ್‌ ಆಗಿತ್ತು. ಒಂದು ದಿನ ಅವರನ್ನು ಗಮನಿಸಿ ಗುರುವಾರ ವಾರ್ಡ್‌ಗೆ ಶಿಫ್ಟ್‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ ವೈದ್ಯರು. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರವೂ ಅವರಿಗೆ ಏನೂ ತೊಂದರೆ ಇಲ್ಲ. ಮುಂದೆ ವಿಶ್ರಾಂತಿ ಪಡೆಯುವ ಅವಶ್ಯಕತೆಯೇನೂ ಇಲ್ಲ. ಮುಂದೆ ಎರಡು ಮೂರು ದಿನಗಳ ಬಳಿಕ ಅವರ ಕೆಲಸ ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಗಾಬರಿಯಾಗೋದು ಬೇಡ ಎಂದ ಅನಿತಾ ಕುಮಾರಸ್ವಾಮಿ

ಗುರುವಾರ ಬೆಳಗ್ಗೆ ಕುಮಾರಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆ ತಂದ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಚೇತರಿಕೆ ಬಳಿಕ ಮನೆಗೆ ಹೋಗಿ ಮಧ್ಯಾಹ್ನ ಮರಳಿದ್ದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿಯವ್ರು ಆರಾಮಾಗಿದ್ದಾರೆ. ಊಹಾಪೋಹದ ಸುದ್ದಿಗಳನ್ನ ಹರಡಬೇಡಿ. ರಾಜ್ಯದ ಜನತೆ ಗಾಬರಿಯಾಗೋದು ಬೇಡ.. ಯಾರೂ ಸಹ ಆತಂಕಪಡೋದು ಬೇಡ ಎಂದು ಹೇಳಿದ್ದಾರೆ.

ನಾಳೆ ಡಿಸ್ಚಾರ್ಜ್‌ ಬೇಡ ಎಂದ ಅನಿತಾ ಕುಮಾರಸ್ವಾಮಿ

ʻʻವೈದ್ಯರು ನಾಳೆಯೇ ಡಿಸ್ಚಾರ್ಜ್ ಮಾಡ್ತೀವಿ ಅಂದ್ರು. ಆದರೆ ನಾನೇ ಬೇಡ ಎಂದು ಹೇಳಿದ್ದೇನೆ. ಡಿಸ್ಚಾರ್ಜ್‌ ಆದರೆ ಮತ್ತೆ ಓಡಾಟ ಶುರು ಮಾಡುತ್ತಾರೆ. ಹಾಗಾಗಿ ಒಂದೆರಡು ದಿನ ಆಸ್ಪತ್ರೆಯಲ್ಲೇ ಇರಲಿ ಎಂದಿದ್ದೇನೆʼʼ ಎಂದು ಅವರು ತಿಳಿಸಿದರು. ಈಗ ತುಂಬಾ ಆರಾಮವಾಗಿ ಇದ್ದಾರೆ. ಸುಳ್ಳು ಸುದ್ದಿ ಹರಡೋದು ಬೇಡ ಎಂದು ಮನವಿ ಮಾಡಿದ್ದಾರೆ ಅನಿತಾ ಕುಮಾರಸ್ವಾಮಿ.

ಆರೋಗ್ಯ ವಿಚಾರಿಸಿದ ಸಿಎಂ, ಬಿಎಸ್‌ವೈ, ಬೊಮ್ಮಾಯಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌.ಡಿ ಕುಮಾರಸ್ವಾಮಿ ಅವರು ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಪೋಲೋ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದರು. ಕುಮಾರಸ್ವಾಮಿ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಬೊಮ್ಮಾಯಿ.

Exit mobile version