ಚಿಕ್ಕಮಗಳೂರು: “ಮನೆಯನ್ನೇ ನಿರ್ವಹಿಸಲಾಗದವರು ದೇಶ, ರಾಜ್ಯವನ್ನು ಹೇಗೆ ನಿರ್ವಹಿಸ್ತೀರಾ?” ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ಕುಟುಂಬದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದು, ನಮ್ಮದು ತುಂಬು ಸಂಸಾರ, ದೊಡ್ಡ ಸಂಸಾರ. ನಮ್ಮ ಕುಟುಂಬದಲ್ಲಿ ರಾಜ್ಯದ ಜನತೆಗೆ ಯಾವ ರೀತಿ ಸೇವೆ ಮಾಡಬೇಕು ಎಂಬ ಪೈಪೋಟಿ ಇದೆ. ಆದರೆ, ಜೋಶಿ ಅವರೇ ಮೊದಲು ನಿಮ್ಮ ಕುಟುಂಬವನ್ನು ನೆಟ್ಟಗೆ ಇಟ್ಟುಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿಯವರು ತಮ್ಮ ಕುಟುಂಬವನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ. ಇನ್ನು ನನ್ನ ಕುಟುಂಬದ ಬಗ್ಗೆ ಹೇಳುತ್ತಾರಾ? ಜೋಶಿ ಕುಟುಂಬಲ್ಲಿ ಎಷ್ಟು ಜನ ಅಣ್ಣ ತಮ್ಮಂದಿರು ಇದ್ದಾರೆ? ಜೋಶಿ ಮೊದಲು ತಮ್ಮನನ್ನು ಸರಿಯಾಗಿ ಇಟ್ಟುಕೊಳ್ಳಲಿ. ಜೋಶಿ ಮತ್ತು ತಮ್ಮನ ನಡುವೆ ಹೊಡೆದಾಟ ಕಿತ್ತಾಟ ಇದೆ ಎಂದು ಕುಟುಕಿದರು.
ಇದನ್ನೂ ಓದಿ: Sonia Gandhi: ಸೋನಿಯಾ ನಿವೃತ್ತಿ ಹೊಂದಲ್ಲ, ಇನಿಂಗ್ಸ್ ಅಂತ್ಯ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರೆ ಸ್ಪಷ್ಟನೆ
ಜೋಶಿ ಬಗ್ಗೆ ದಾಖಲೆಗಳನ್ನು ಕೊಡುತ್ತೇನೆ ಎಂದು ಅವರ ಸಹೋದರ ನನಗೆ ಕರೆ ಮಾಡುತ್ತಿದ್ದಾರೆ. ರಾಮಾಯಣ, ಮಹಾಭಾರತದಲ್ಲಿ ಏನು ನಡೆದಿದೆ? ಅಲ್ಲಿಯೂ ಕಲಹಗಳು ಇತ್ತು. ದಶರಥನಿಗೆ ಮೂರು ಜನ ಹೆಂಡತಿಯರಿದ್ದರು. ವಚನದಿಂದ ರಾಮನನ್ನೇ ಕಾಡಿಗೆ ಅಟ್ಟಲಿಲ್ಲವೇ? ಕುಟುಂಬದಲ್ಲಿ ಕಲಹಗಳು ನಡೆಯುತ್ತಾ ಇರುತ್ತವೆ. ಹಾಗಂತ ನಾನು ರಾಜ್ಯವನ್ನು ಹಾಳು ಮಾಡಿದ್ದೇನಾ? ಎಂದು ಪ್ರಶ್ನೆ ಮಾಡಿದರು.
ಜೋಶಿ ಹೇಳಿದ್ದೇನು?
ಮನೆಯನ್ನೇ ನಿರ್ವಹಿಸಲಾಗದವರು ಇನ್ನು ದೇಶ, ರಾಜ್ಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ? ಮನೆಯಲ್ಲಿ 10-12 ಜನವಿದ್ದು, ಎಲ್ಲರೂ ಎಲೆಕ್ಷನ್‌ಗೆ ನಿಂತರೂ ನಿಮಗೆ ಸಮಾಧಾನ ಇಲ್ಲವೇ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾತನ್ನು ಹೇಳಿದ್ದರು. ಮನೆಯಲ್ಲಿ ಇರುವವರೆಲ್ಲರೂ ಎಲೆಕ್ಷನ್‌ಗೆ ಸ್ಪರ್ಧೆ ಮಾಡಿದರೆ ಮನೆಯನ್ನು ಯಾರು ನಿರ್ವಹಣೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದ್ದರು. ನಾನು ಇದನ್ನು ಮುಂದುವರಿಸಿ ಹೇಳುವುದಾದರೆ, “ನಿಮ್ಮ ಕುಟುಂಬ, ಮನೆಯನ್ನು ನಿರ್ವಹಣೆ ಮಾಡಲು ಆಗದವರು, ದೇಶ ಹಾಗೂ ರಾಜ್ಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.
ಜೋಶಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ
ಇದನ್ನೂ ಓದಿ: BJP Politics: ಶಿಕಾರಿಪುರದಿಂದಲೇ ಸ್ಪರ್ಧೆ: ಗೊಂದಲಗಳಿಗೆ ತೆರೆ ಎಳೆದ ಬಿ.ವೈ. ವಿಜಯೇಂದ್ರ
ಕೆಲವು ರಾಷ್ಟ್ರಗಳಲ್ಲಿ ಜಾತಿ, ಜಾತಿಗಳ ಮಧ್ಯೆ ಹೊಡೆದಾಟ ಆಗುತ್ತದೆ. ಕೆಲವು ಕಡೆ ಒಂದೇ ಜಾತಿಯವರು ಇದ್ದರೂ ಹೊಡೆದಾಟ ಆಗುತ್ತದೆ. ಹಾಗೇ ಮನೆಯವರಿಗೆಲ್ಲ ಟಿಕೆಟ್ ಕೊಟ್ಟರೂ ಯಾಕೆ ಬಡಿದಾಟ ಮಾಡಿಕೊಳ್ಳುತ್ತಿದ್ದಾರೆ? ಇಡೀ ದೇಶದಲ್ಲಿ ಒಂದೇ ಸಮಾಜದವರು ಇದ್ದರೂ ದಂಗೆ, ಬಡಿದಾಟ ಆಗುತ್ತದೆ. ಮನೆಯವರಿಗೆ ಎಲ್ಲರಿಗೂ ಟಿಕೆಟ್ ಕೊಟ್ಟರೂ ಯಾಕೆ ಬಡಿದಾಡುತ್ತಿದ್ದಾರೋ ಅರ್ಥ ಆಗುತ್ತಿಲ್ಲ. ಮೊದಲು ಮನೆಯನ್ನು ಸರಿ ಮಾಡಿಕೊಳ್ಳಿ, ಆಮೇಲೆ ರಾಜ್ಯವನ್ನು ಆಳೋಕೆ ಬನ್ನಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.