ಆನೇಕಲ್: ಬೆಂಗಳೂರು-ಮೈಸೂರು ಹೆದ್ದಾರಿಯ ಕ್ರೆಡಿಟ್ ಯಾರಿಗೂ ಸೇರಲ್ಲ. ಅದು ಅಭಿವೃದ್ಧಿ ಪೂರಕವಾದ ಕೆಲಸ. ಮೊದಲು ನಾಲ್ಕು ಪಥದ ರಸ್ತೆ ಇತ್ತು, ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆ (JDS Pancharatna) ಕೆಲಸ ನನೆಗುದಿಗೆ ಬಿದ್ದಿತ್ತು. ನಾನು ಸಿಎಂ ಆದ ಬಳಿಕ ಅದನ್ನು ಜಾರಿಗೆ ತಂದಿದ್ದೆ. ನಾವೇ ಅಭಿವೃದ್ಧಿ ಮಾಡಿರುವುದು ಎಂಬಂತೆ ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ. ಕ್ರೆಡಿಟ್ ಪಡೆಯುವುದಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳು ಕೆಲಸ ಮಾಡಿ ತೋರಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕ್ರೆಡಿಟ್ ವಾರ್ ವಿಚಾರಕ್ಕೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಭಾನುವಾರ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ಯಾವುದೇ ಅಭಿವೃದ್ಧಿ ಕೆಲಸ ನಮ್ಮಿಂದಲೇ ಆಗಿದ್ದು ಎಂದು ಕ್ರೆಡಿಟ್ ಪಡೆಯುವುದಲ್ಲ, ಮಾಡುವ ಅಭಿವೃದ್ಧಿ ಕೆಲಸದಲ್ಲಿ ತೋರಿಸಬೇಕು. ಹೆದ್ದಾರಿಗೆ ಕೇಂದ್ರ ಸರ್ಕಾರ ಕೂಡ ಹಣ ಹಾಕಿಲ್ಲ. ಆ ಭೂಮಿ ರಾಜ್ಯದ ರೈತರ ಭೂಮಿ, ಜನ ರಸ್ತೆಯಲ್ಲಿ ಓಡಾಡಿ, ಹಣ ಕಟ್ಟುತ್ತಾರೆ. ಈ ರೀತಿ ಬಾಲಿಶ ಹೇಳಿಕೆ ಸರಿಯಲ್ಲ ಎಂದರು.
ರಸ್ತೆಯನ್ನು ಮೈಸೂರಿನ ಮಹಾರಾಜರು ಆರಂಭ ಮಾಡಿದರು. ನಂತರ ಬಂದ ರಾಜಕಾರಣಿಗಳು ಮೇಲ್ದರ್ಜೆಗೆ ಏರಿಸಿದರು. ಮೋದಿ ಬಂದರು ಹೋದರು ಅಷ್ಟೇ, ಇದರಿಂದ ಏನೂ ಆಗುವುದಿಲ್ಲ. ಬಿಜೆಪಿಗೆ ಯಾವುದೇ ಪ್ಲಸ್ ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Modi in Karnataka: ಮಂಡ್ಯದ ಮಂದಿಯ ಮನಗೆದ್ದ ನರೇಂದ್ರ ಮೋದಿ ರೋಡ್ ಶೋ: ರಸ್ತೆಯುದ್ದಕ್ಕೂ ಹೂಮಳೆ ಸುರಿಸಿದ ಜನರು
ಸಂಸದೆ ಸುಮಲತಾ ಪ್ರಧಾನಿ ಮೋದಿಗೆ ಬೆಲ್ಲ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಸಂಸ್ಕೃತಿ ಮೆರೆದಿದ್ದಾರೆ ಅಷ್ಟೇ, ನಮ್ಮಲ್ಲಿ ಒಂದು ಸಂಸ್ಕೃತಿ ಇದೆ. ಯಾರೇ ಅತಿಥಿಗಳು ಬಂದರೂ ಅವರನ್ನು ಸತ್ಕರಿಸುವುದು ಸಾಮಾನ್ಯ. ಹಾಗೆಯೇ ಬೆಲ್ಲ ಕೊಟ್ಟು ಸಂಸ್ಕೃತಿ ಮೆರೆದಿರಬಹುದು ಎಂದರು.
ಆನೇಕಲ್ ಅಭ್ಯರ್ಥಿ ಕೆ.ಪಿ. ರಾಜು ಅವರ ಪರವಾದ ಅನುಕಂಪ ಅಲೆ ಇದೆ. ರಾಜುಗೆ ಪಕ್ಷ ಭೇದ ಮರೆತು ಜನರು ಆಶೀರ್ವಾದ ಮಾಡುತ್ತಾರೆ. ಈ ಭಾಗದಲ್ಲಿ ಕೈಗಾರಿಕೆ ಬೆಳೆದಿದೆ, ಇಲ್ಲಿನ ರಾಗಿ ಬೆಳೆಗೆ ಎಕರೆಗೆ ಹತ್ತು ಸಾವಿರ ಸಹಾಯಧನ ರೈತರಿಗೆ ನೀಡಲಾಗುವುದು ಎಂದು ಹೇಳಿದರು.