Site icon Vistara News

Ram Mandir: ರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಿಲ್ಲ; ಇದು ಚುನಾವಣಾ ಗಿಮಿಕ್ ಅಷ್ಟೇ: ಎಚ್‌.ಡಿ. ಕುಮಾರಸ್ವಾಮಿ

HD Kumaraswamy

#image_title

ಬೆಂಗಳೂರು: ರಾಮನಗರದಲ್ಲಿ ರಾಮಮಂದಿರ (Ram Mandir) ನಿರ್ಮಾಣ ಮಾಡಲು ಇನ್ನೂ ಸ್ಥಳ ಗುರುತು ಆಗಿಲ್ಲ. ರಾಮದೇವರ ಬೆಟ್ಟದಲ್ಲಿ ನಿರ್ಮಿಸುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಅಲ್ಲಿ ಅರಣ್ಯ ಪ್ರದೇಶದ ಜಾಗವಿದ್ದು, ಹಲವಾರು ತಾಂತ್ರಿಕ ಹಾಗೂ ಕಾನೂನು ಅಡಚಣೆಗಳನ್ನು ಕ್ಲಿಯರ್‌ ಮಾಡಿಕೊಂಡು ಕಾಮಗಾರಿ ಮಾಡಬೇಕಿದೆ. ಮೂರು ವರ್ಷದ ಹಿಂದೆ ರಾಮಮಂದಿರ ಕಟ್ಟಿದ್ದರೆ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತಿದ್ದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಇದೆ. ಒಂದು ತಿಂಗಳಲ್ಲಿ ಇವರು ಏನು ಮಾಡುತ್ತಾರೆ? ಕಾಟಾಚಾರಕ್ಕೆ ಗುದ್ದಲಿ ಪೂಜೆ ಮಾಡುತ್ತಾರೋ ಏನೋ ಗೊತ್ತಿಲ್ಲ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲಿ ಚುನಾವಣೆ ಸಂದರ್ಭದಲ್ಲಿ ನಡೆದ ಬಜೆಟ್‌ನಲ್ಲಿ ಎಷ್ಟು ಕಾರ್ಯಕ್ರಮ ಘೋಷಣೆ ಆಗಿದ್ದವು. ಯಾವುದಾದರೂ ಭರವಸೆ ಈಡೇರಿದೆಯಾ. ಈ ಬಜೆಟ್ ಕೂಡ ಅಷ್ಟೇ. ಅವೆಲ್ಲ ಅನುಷ್ಠಾನವಾಗಬೇಕು ಎಂದರೆ ಮುಂದಿನ‌ ಸರ್ಕಾರ ಬರಬೇಕು ಎಂದರು.

ಇದನ್ನೂ ಓದಿ | Flower Politics : ಕಾಂಗ್ರೆಸ್‌ ನಾಯಕರ ಕಿವಿಗೆ ಹೂವಿಟ್ಟು ಕಳುಹಿಸಿದ್ದು ಯಾರು? ಇದರ ಹಿಂದಿನ ಕಾಣದ ಕೈ ಯಾವುದು?

ರಾಮ ಮಂದಿರ ನಿರ್ಮಾಣ ಚುನಾವಣಾ ಗಿಮಿಕ್ ಅಷ್ಟೇ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನನ್ನ ಕನಸಿನ ಕೂಸು. 2006ರಲ್ಲೇ ಮೆಡಿಕಲ್, ನರ್ಸಿಂಗ್, ಆಸ್ಪತ್ರೆಯ ನೀಲಿ ನಕ್ಷೆ ಸಿದ್ಧಪಡಿಸಿದ್ದೆ. ಆಗ ಕೆಲವೊಂದು ಜಮೀನಿನ ಸಮಸ್ಯೆ ಆಗಿತ್ತು. ಆದರೆ ಕೆಲವೊಂದು ಕಾರಣಕ್ಕೆ ಕೆಲಸವಾಗಲಿಲ್ಲ. ಈ ವಿವಿಯ ಹಣವನ್ನು ಕೊಡಲು ತಕರಾರು ಮಾಡಿದರು. ನಮ್ಮ ಸರ್ಕಾರದಲ್ಲೇ ಮಾಡಲು ಪ್ರಯತ್ನಪಟ್ಟೆ, ಆದರೆ ಆಗಲಿಲ್ಲ. ಇದೇ ಬಿಜೆಪಿಯವರು ರಾಜ್ಯಪಾಲರಿಂದ ಹಾಗೂ ಸಿಂಡಿಕೇಟ್‌ನಿಂದ ಅಡ್ಡಗಾಲು ಹಾಕಿದ್ದರು ಎಂದು ಆರೋಪಿಸಿದರು.

ರಾಮಮಂದಿರ ನಿರ್ಮಾಣದ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿರುವ ವಿಡಿಯೊ ಇಲ್ಲಿದೆ

ತರಾತುರಿಯಲ್ಲಿ 600 ಕೋಟಿ ರೂಪಾಯಿಗಳನ್ನು ಕಟ್ಟಡ ನಿರ್ಮಾಣಕ್ಕೆ ವರ್ಗಾವಣೆ ಮಾಡಿದ್ದಾರೆ. ಮೊದಲು 300 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದ್ದಾರೆ. 24 ಗಂಟೆಯಲ್ಲಿ ಹಣ ವರ್ಗಾವಣೆ ಮಾಡಲು ಹಾಗೂ ಟೆಂಡರ್ ಸ್ಪೀಡ್ಅಪ್ ಮಾಡಲು ಹೇಳಿದ್ದಾರೆ. ಇದರ ಗುದ್ದಲಿ ಪೂಜೆಗೆ ತರಾತುರಿಯಲ್ಲಿ ಪ್ರಧಾನಿಯನ್ನು ಕರೆಸುತ್ತಾರೋ ಏನೋ? ಇದೊಂದು ಚುನಾವಣೆ ಗಿಮಿಕ್ ಅಷ್ಟೆ ಎಂದ ಅವರು, ಮುಂದಿನ ಸರ್ಕಾರದಲ್ಲಿ ಇವರ ಕೆಲವೊಂದು ಆತುರದ ನಿರ್ಧಾರಗಳಿಗೆ ಮೋಕ್ಷ ಕಾಣುತ್ತದೆ. ಇನ್ನೊಂದು ತಿಂಗಳಲ್ಲಿ ಪ್ರಧಾನಿಯನ್ನು ಕರೆಸಿ ಏನೇನೋ ಮಾಡುತ್ತಾರೆ, ಜನ ಇದಕ್ಕೆ ಮನ್ನಣೆ ಕೊಡಬೇಕಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ‌Political Movies: ಕಾಶ್ಮೀರ್‌ ಫೈಲ್ಸ್ ಮಾದರಿಯಲ್ಲಿ ಕೋವಿಡ್‌ ಫೈಲ್ಸ್ ಚಿತ್ರ ನಿರ್ಮಾಣಕ್ಕೆ ಮುಂದಾದರಾ ಡಿ.ಕೆ. ಶಿವಕುಮಾರ್?

ಈ ನಾಡು ಉತ್ತಮವಾಗಿ ಅಭಿವೃದ್ಧಿಯಾಗಲಿ, ಪ್ರತಿ ಕುಟುಂಬ ನೆಮ್ಮದಿಯಾಗಿ ಬದುಕಲಿ ಎಂದು ಶಿವರಾತ್ರಿ ಹಿನ್ನೆಲೆಯಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಎರಡನೇ ಹಂತದ ಪಟ್ಟಿ ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿದ್ದು, ಪಕ್ಷದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳು ಸರಿ ಹೋಗಲಿವೆ. ಪಟ್ಟಿಯಲ್ಲಿ ಯಾವುದೇ ಗೊಂದಲ ಇಲ್ಲ. ದೇವೇಗೌಡರ ಅನುಮತಿ ಪಡೆದು ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಕಾಂಗ್ರೆಸ್, ಬಿಜೆಪಿ ಪಟ್ಟಿ ಬಿಡುಗಡೆ ಆಗುವುದರೊಳಗೆ ನಮ್ಮ ಪಟ್ಟಿ ಬಿಡುಗಡೆ ಆಗುತ್ತದೆ, ಜತೆಗೆ ಹಾಸನದ ಟಿಕೆಟ್ ಕೂಡ ಘೋಷಣೆ ಆಗಲಿದೆ ಎಂದು ತಿಳಿಸಿದರು.

Exit mobile version