ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಭಾರತೀಯ ಉಕ್ಕು ಪ್ರಾಧಿಕಾರದ (Steel Authority of India Limited (SAIL)) ಅಧ್ಯಕ್ಷ ಅಮರೀಂದು ಪ್ರಕಾಶ್ ಸೇರಿ ವಿವಿಧ ಅಧಿಕಾರಿಗಳು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನೂತನ ಸಚಿವರಿಗೆ ಭಾರತೀಯ ಉಕ್ಕು ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಸಂಸ್ಥೆಯ ಯೋಜನೆಗಳು, ಚಟುವಟಿಕೆಗಳ ಬಗ್ಗೆ ತಿಳಿಸಿದ್ದಾರೆ. ಬಿಲಾಯ್ ಸೇರಿ ಇನ್ನಿತರೆ ಉಕ್ಕು ತಯಾರಿಕಾ ಘಟಕಗಳಿಗೆ ಭೇಟಿ ನೀಡುವಂತೆ ಸಚಿವರನ್ನು ಅಧಿಕಾರಿಗಳು ಕೋರಿದ್ದಾರೆ. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಪುನಶ್ಚೇತನದ ಬಗ್ಗೆಯೂ ಅಧಿಕಾರಿಗಳ ಜತೆ ಪ್ರಮುಖವಾಗಿ ಸಚಿವ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Modi 3.0 Cabinet: ಜೋಶಿಗೆ ಆಹಾರ, ಎಚ್‌ಡಿಕೆಗೆ ಬೃಹತ್ ಕೈಗಾರಿಕೆ, ನಿರ್ಮಲಾಗೆ ವಿತ್ತ, ಸೋಮಣ್ಣಗೆ ಡಬಲ್ ಖುಷಿ, ಶೋಭಾಗೆ MSME
ಸೋಮವಾರ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ನಿರುದ್ಯೋಗ ಸೇರಿ ದೇಶದ ಇತರ ಸಮಸ್ಯೆಗಳನ್ನು ಬಗೆಹರಿಸುವ ಸವಾಲು ನಮ್ಮ ಮುಂದಿದೆ. ಮುಂದಿನ 15 ದಿನದಲ್ಲಿ ಬೃಹತ್ ಕೈಗಾರಿಕಾ ಇಲಾಖೆ ಕುರಿತು ವಿಷನ್ ಡಾಕ್ಯುಮೆಂಟ್ ಸಿದ್ದಪಡಿಸಲಿದ್ದೇನೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನ ಪಡೆದು ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದರು.
ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಇಲಾಖೆಯಲ್ಲೂ ಹೊಸ ಬದಲಾವಣೆ ತರಲು ಪ್ರಯತ್ನ ಮಾಡು ತ್ತೇನೆ. ಇದಕ್ಕಾಗಿ ದೇಶಾದ್ಯಂತ ಸುತ್ತಾ ಡಲು ನಿರ್ಧರಿಸಿದ್ದೇನೆ. ಉದ್ಯಮಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನನ್ನ ಮುಂದೆ ದೊಡ್ಡ ಸವಾಲಿದೆ. ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿ ಕರ್ನಾಟಕದಲ್ಲೂ ವಿಐಎಸ್‌ಎಲ್ ಸೇರಿ ಹಲವಾರು ಸಮಸ್ಯೆಗಳಿವೆ. ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಪ್ರಾಮಾಣಿಕವಾಗಿ ಕ್ಷಣ ವ್ಯರ್ಥಮಾಡದೆ ಕೆಲಸ ಮಾಡುತ್ತೇನೆ. ನನ್ನದೇ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದರು.