ಹಾಸನ: ಪಾಪ ಕನಕಪುರದವರು… ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟವರು ಹೇಳುತ್ತಿದ್ದಾರೆ! ಕುಮಾರಸ್ವಾಮಿ 39 ಸೀಟ್ ಗೆದ್ದರು, ಮುಖ್ಯಮಂತ್ರಿ ಮಾಡಿದ್ದೀವಿ, ದೇವೇಗೌಡರು 16 ಸೀಟ್ ಗೆದ್ದರು, ಪ್ರಧಾನಮಂತ್ರಿ ಮಾಡಿದ್ದೀವಿ ಎಂದು ಹೇಳಿದ್ದಾರೆ. ಆದರೆ, ನನ್ನ ಮತ್ತು ದೇವೇಗೌಡರ ಸರ್ಕಾರಗಳನ್ನು ತೆಗೆದವರು ಯಾರು ಎನ್ನುವುದನ್ನು ಅವರು ಹೇಳಬೇಕಲ್ಲವೇ? ಹೀಗೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ತಿರುಗೇಟು ಕೊಟ್ಟರು.
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆವತ್ತು ನಾನಾಗಲಿ ಅಥವಾ ದೇವೇಗೌಡರಾಗಲಿ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಬಂದಿದ್ದೆವಾ? ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದು ಕಮ್ಯುನಿಸ್ಟ್ ಪಕ್ಷಗಳು ಹಾಗೂ ಸಂಯುಕ್ತ ರಂಗದ ಅಂಗಪಕ್ಷಗಳು. ಒಬ್ಬ ಕನ್ನಡಿಗನನ್ನು ಪ್ರಧಾನಿ ಸ್ಥಾನದಿಂದ ತೆಗೆದವರು ಯಾರು? ನಾನು ಏನು ತಪ್ಪು ಮಾಡಿದ್ದೆ ಎಂದು ನನ್ನ ಸರ್ಕಾರ ತೆಗೆದರು? ಇದರ ಬಗ್ಗೆಯೂ ಉಪ ಮುಖ್ಯಮಂತ್ರಿ ಹೇಳಬೇಕಲ್ಲವೇ ಎಂದು ಚಾಟಿ ಬೀಸಿದರು.
ಈ ಸರ್ಕಾರದಲ್ಲಿ ದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಅಹಿಂದ ಎಂದು ಎಷ್ಟು ವರ್ಷದಿಂದ ಇಟ್ಟುಕೊಂಡಿದ್ದೀರಾ? ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರಾ? ಅವರಿಗೆ ಮೀಸಲಿಟ್ಟಿದ್ದ ಹಣ ದುರುಪಯೋಗ ಮಾಡಿಕೊಂಡಿದ್ದೀರಿ. ದಾನ-ಧರ್ಮ ಮಾಡಿ ಬಂದವರಂತೆ ಇವರು ಮಾತನಾಡುತ್ತಿದ್ದಾರೆ. ಬಹಳ ನೀತಿವಂತರು ಇವರು ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ | HD Kumaraswamy: ದರೋಡೆ, ಲೂಟಿ ತಡೆಯಲು ಸೇನೆ ಕರೆಸಬೇಕಿತ್ತಾ? ಡಿಕೆಶಿಗೆ ತಿರುಗೇಟು ಕೊಟ್ಟ ಎಚ್‌ಡಿಕೆ
ಕುಮಾರಸ್ವಾಮಿ ಇಲ್ಲಿ ಏಕೆ ಬರುತ್ತಾನೆ ಎಂದು ಉಪ ಮುಖ್ಯಮಂತ್ರಿ ಕೇಳುತ್ತಾರೆ. ಮಿಲಿಟರಿ ಕರೆದುಕೊಂಡು ಬಂದಿದ್ದಾರೆಯೇ ಎನ್ನುತ್ತಾರೆ. ಇಲ್ಲಿಗೆ ಮಿಲಿಟರಿ ಬರುವ ಕಾಲವೂ ಬರುತ್ತದೆ. ಅವರು ಏಕೆ ಆ ರೀತಿಯ ಹೇಳಿಕೆ ಕೊಟ್ಟರು ಎಂದು ನಾನು ಯೋಚನೆ ಮಾಡಿದೆ. ದರೋಡೆ ಮಾಡುವುದನ್ನು ನಿಲ್ಲಿಸಲು, ಮಿಲಿಟರಿ ಕರೆದುಕೊಂಡು ಬನ್ನಿ ಎಂಬರ್ಥದಲ್ಲಿ ಅವರು ಹೇಳಿಕೆ ಕೊಟ್ಟಿರಬಹುದು. ಮಿಲಿಟರಿ ಬರುವ ಕಾಲವೂ ಬರುತ್ತದೆ, ಆಗ ಕರೆದುಕೊಂಡು ಬರೋಣವಂತೆ ಎಂದು ಡಿಕೆಶಿಗೆ ತಿರುಗೇಟು ಕೊಟ್ಟರು.
ಹಾಸನ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಮಳೆ ಅನಾಹುತ ಆಗಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಅವೈಜ್ಞಾನಿಕವಾದ ಕಳಪೆ ಕಾಮಗಾರಿಯನ್ನು ಗಮನಿಸಿದ್ದೇನೆ. ಲೋಕಸಭೆ ಚುನಾವಣೆ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ. ಕೇಂದ್ರದ ಸಾರಿಗೆ ಸಚಿವರ ಜತೆಗೂಡಿ ಹಾಸನಕ್ಕೆ ಬರಬೇಕು ಎಂಬ ಉದ್ದೇಶವನ್ನು ಕೂಡ ಹೊಂದಿದ್ದೇನೆ. ಈ ರಸ್ತೆಯನ್ನು ಸುರಂಗ ಮಾರ್ಗದ ಮೂಲಕ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪ ಇತ್ತು. ಅರಣ್ಯ ಇಲಾಖೆಯ ತೊಡಕುಗಳು ಇವೆ, ಅದರ ಬಗ್ಗೆಯೂ ಸಾರಿಗೆ ಸಚಿವರ ಜತೆ ಚರ್ಚಿಸುತ್ತೇನೆ. ನಾಳೆಯಿಂದ ಸಂಸತ್ ಅಧಿವೇಶನ ಪ್ರಾರಂಭ ಆಗುತ್ತಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ದಲಿತರ ಭೂಮಿಗೆ ಸಿಎಂ ಕೈ
ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕಳೆದ ಒಂದು ಕಾಲ ವರ್ಷದಿಂದ ಅವರು ಆಡಳಿತ ನಡೆಸುತ್ತಿದ್ದಾರೆ. 2010-2011 ಇಸವಿಯದ್ದು ಈಗ ಮಾತನಾಡುತ್ತಿದ್ದೀರಾ, ಅವತ್ತು ನಿಮ್ಮ ಗಮನಕ್ಕೆ ಬಂದಿರಲಿಲ್ಲವಾ? ನೀವು ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಈಗ ತನಿಖೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದೀರಾ? ಯಾವ ತನಿಖೆ ನಡೆಸಿ ಯಾರ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಿ? ಸ್ವತಂತ್ರವಾದ ಸರ್ಕಾರವನ್ನು ಜನರು ನನಗೆ ಕೊಡಲಿಲ್ಲ. ನನಗೆ ಕೆಲ ವರದಿಗಳನ್ನು ಕೊಡಲು ಬಿಡಲಿಲ್ಲ. ಮೈಸೂರಿನ ಮುಡಾದಲ್ಲಿ ಅಷ್ಟೆಲ್ಲಾ ತಪ್ಪು ಮಾಡಿ ನನ್ನ ಬಾಮೈದ ತಪ್ಪು ಮಾಡಿದ್ದಾನೆ ಎಂದು ಅವರ ಮೇಲೆ ಸಿಎಂ ಹೇಳುತ್ತಿದ್ದಾರೆ. ಆ ಭೂಮಿಯನ್ನು ನಿಮ್ಮ ಬಾಮೈದ ತೆಗೆದುಕೊಳ್ಳಲು ಅವಕಾಶ ಇತ್ತಾ? ಅದು ದಲಿತರಿಗೆ ಸೇರಿದ ಭೂಮಿ ಎಂದು ಕಿಡಿಕಾರಿದರು.
ಸತ್ತವನು ಬಂದು ಅರ್ಜಿ ಹಾಕಿದನಾ?
ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಯಾರದ್ದೋ ಜಮೀನು, 62 ಕೋಟಿ ಕೊಟ್ಟರೆ ಪುಕ್ಸಟ್ಟೆ ಬಿಟ್ಟುಕೊಡ್ತೀರಾ ನೀವು? 1992ರಲ್ಲಿ ಅಂತಿಮ ಅಧಿಸೂಚನೆ ಆಗಿದೆ. 1998ರಲ್ಲಿ ಅವರು ಬದುಕೇ ಇರಲಿಲ್ಲ. ಡಿನೋಟಿಫೀಕೇಷನ್ ಮಾಡಿ ಎಂದು ಅರ್ಜಿ ಕೊಟ್ಟವರು ಯಾರು? ನಿಂಗ ಎನ್ನುವ ವ್ಯಕ್ತಿ ತೀರಿಕೊಂಡಿದ್ದು ಯಾವಾಗ? ಸ್ವರ್ಗದಿಂದ ಬಂದು ಅರ್ಜಿ ಕೊಟ್ಟು ಡಿನೋಟಿಫಿಕೇಷನ್ ಮಾಡಿ ಎಂದು ಕೇಳಿದ್ರಾ ಅವರು? ಆ ಜಮೀನನ್ನು ನಿಮ್ಮ ಬಾಮೈದ ಖರೀದಿ ಮಾಡಿ ದಾನ ಕೊಟ್ಟ ಎನ್ನುವುದೆಲ್ಲಾ ಬರೀ ಡ್ರಾಮಾ. ಇದರಲ್ಲಿ ನಿಮ್ಮ ಕುಟುಂಬದ ನೇರ ಪಾತ್ರ ಇದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.
ಮುಡಾದಲ್ಲಿ ನನ್ನದೂ ನಿವೇಶನ ಇದೆ ಎಂದು ಚರ್ಚೆ ಆಗುತ್ತಿದೆ. ನೂರಾರು ಬಾರಿ ಹೇಳಿದ್ದೇನೆ, ನನ್ನ ಜೀವನ ತೆರೆದ ಪುಸ್ತಕ ಎಂದು. ನನಗೆ 1985ರಲ್ಲಿ 21,000 ಚದರ ಅಡಿ ಜಾಗವನ್ನು ಇಂಡಸ್ಟ್ರಿಯಲ್ ಲೇಔಟ್‌ನಲ್ಲಿ ಹಂಚಿಕೆ ಮಾಡಿದ್ದಾರೆ. ನಲವತ್ತು ವರ್ಷದ ಹಿಂದೆ ಅದು ಹಂಚಿಕೆ ಆಗಿದೆ. ದಾಖಲೆ ತೆಗೆಯಿರಿ. ನನಗೆ ಹಂಚಿಕೆ ಆಗಿದ್ದಕ್ಕೆ ಹಣವನ್ನೂ ಕಟ್ಟಿದ್ದೇನೆ. ನನಗೆ ಹಂಚಿಕೆ ಆಗಿರುವ ಜಾಗದಲ್ಲಿ ಯಾವನೋ ಒಬ್ಬ ಕಟ್ಟಡ ಕಟ್ಟಿಕೊಂಡಿದ್ದಾನೆ. ಆತ ಕಟ್ಟಡ ಕಟ್ಟಿರುವುದರಿಂದ ಮತ್ತೆ ಅರ್ಜಿ ಹಾಕುವುದು ಬೇಡ ಅಂದುಕೊಂಡಿದ್ದೆ. ಆದರೆ, ನನ್ನ ಸ್ನೇಹಿತರು ನನ್ನ ಗಮನಕ್ಕೆ ಬಾರದೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಇಲ್ಲಿಯವರೆಗೆ ನನಗೆ ಯಾವ ಮಾಹಿತಿಯೂ ಬಂದಿಲ್ಲ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ | Vande Mataram: ಸಂಸತ್ತಿನಲ್ಲಿ ವಂದೇ ಮಾತರಂ, ಥ್ಯಾಂಕ್ಸ್ ಎಂದು ಹೇಳುವಂತಿಲ್ಲ; ಏಕಿಂಥ ಆದೇಶ?
ಮುಖ್ಯಮಂತ್ರಿಗಳೇ ದಯಮಾಡಿ ಹೇಳುತ್ತೇನೆ, ದಾಖಲೆಗಳನ್ನು ತೆಗೆದು ನೋಡಿ. ಯಾವ್ಯಾವ ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ ಎಂದು ಜನರ ಮುಂದೆ ಇಟ್ಟುಬಿಡಿ. ವಿಷಯ ತಿಳಿದಕೊಂಡು, ದಾಖಲೆ ಹಿಡಿದುಕೊಂಡು ಮಾತಾಡಬೇಕು. ಮುಡಾದ್ದು ದಾಖಲೆ ಸಮೇತ ಮಾತನಾಡುತ್ತಿದ್ದೇವೆ ನಾವು. ನಿಮಗೆ ನಾಚಿಕೆ ಆಗಲ್ವಾ ಸಿದ್ದರಾಮಯ್ಯನವರೇ..? ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತದೆ, ನಿಮ್ಮ ಮುಖದಲ್ಲಿ ಪಾಪಪ್ರಜ್ಞೆ ಎನ್ನುವುದು ಎದ್ದು ಕಾಣುತ್ತಿದೆ. ವಿಧಾನಸಭೆಯಲ್ಲಿ ನೀವು ಕೊಟ್ಟ ಉತ್ತರ ಇದೆಯಲ್ಲಾ, ಅದನ್ನು ನೋಡಿದರೆ ಗೊತ್ತಾಗುತ್ತದೆ ನಿಮ್ಮ ಸ್ಥಿತಿ. ಹಿಂದೆ ನೀವು ಯಾವ ರೀತಿ ಉತ್ತರ ಕೊಡುತ್ತಿದ್ದಿರಿ, ಶುಕ್ರವಾರ ಯಾವ ರೀತಿ ಉತ್ತರ ಕೊಟ್ಟಿರಿ? ಎಲ್ಲವನ್ನು ಗಮನಿಸಿದ್ದೇನೆ. ಈ ಸರ್ಕಾರದ ಪಾಪದ ಕೊಡ ತುಂಬಿ ಹೋಗಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.