ಬೆಂಗಳೂರು: ಮಗ ಪ್ರಜ್ವಲ್ ರೇವಣ್ಣ (Prajwal Revanna) ಮಾಡಿದ್ದಾರೆ ಎನ್ನಲಾದ ತಪ್ಪಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಬಂಧಿತರಾಗಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು (SIT Officials) ವಶಪಡಿಸಿಕೊಂಡಿದ್ದು, ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊಗಳು ವೈರಲ್ ಆದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದು, ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈಗ ಎಚ್.ಡಿ.ರೇವಣ್ಣ ಅವರನ್ನೂ ಅಮಾನತುಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸುತ್ತಲೇ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡ ಸೇರಿ ಹಲವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣವು ಜೆಡಿಎಸ್‌ಗೆ ಮುಜುಗರ ತಂದಿದ್ದು, ಮೈತ್ರಿ ಪಕ್ಷವಾದ ಬಿಜೆಪಿಯೂ ಪ್ರಕರಣದಿಂದ ದಿನೇದಿನೆ ಅಂತರ ಕಾಪಾಡಿಕೊಳ್ಳುತ್ತಿದೆ. ಹಾಗಾಗಿ, ಎಚ್.ಡಿ.ರೇವಣ್ಣ ಅವರನ್ನೂ ಪಕ್ಷದಿಂದ ಅಮಾನತುಗೊಳಿಸಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಅಮಾನತುಗೊಳಿಸಿದರೆ ತಂದೆ-ಮಗ ಇಬ್ಬರೂ ಅಮಾನತಾದಂತಾಗುತ್ತದೆ. ಮುಜುಗರ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಅವರ ಬಳಿ ಇರುವ ಏಕೈಕ ಮಾರ್ಗ ಎಂದರೆ, ಅವರನ್ನು ಅಮಾನತುಗೊಳಿಸುವುದಾಗಿದೆ ಎಂದು ಹೇಳಲಾಗುತ್ತಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ರೇವಣ್ಣ ಅವರನ್ನು ವಶಪಡಿಸಿಕೊಂಡಿರುವ ಕುರಿತು ಪ್ರಕ್ರಿಯೆ ಮುಗಿಸುವ ಅವರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ಆದಾಗ್ಯೂ, ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಕಾರಣ ಎಸ್‌ಐಟಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆ ಬಳಿಕ ವಿಚಾರಣೆ ನಡೆಸಲಿದ್ದಾರೆ. ಇಲ್ಲವೇ, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ಶರಣಾಗತಿ?
“ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ಅವರು ನಡೆದುಕೊಳ್ಳುತ್ತಾರೆ. ಇನ್ನು, ಪ್ರಜ್ವಲ್ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.
ಇದನ್ನೂ ಓದಿ: HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ