ಹಾಸನ: ಬಿಜೆಪಿಯವರು ನಾವು ಅಡಿಗಲ್ಲು ಹಾಕಿರುವ ಕಾಮಗಾರಿಗಳಿಗೆ ಮತ್ತೆ ಅಡಿಗಲ್ಲು ಹಾಕಲು ಹೊರಟಿದ್ದಾರೆ. ಮಾನ, ಮರ್ಯಾದೆ ಇದ್ದರೆ ಆ ಕೆಲಸ ಮಾಡಬಾರದು. ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈಗಾಗಲೇ ಅಡಿಗಲ್ಲು ಹಾಕಿದ್ದಾರೆ. ಈಗ ಮೊತ್ತೊಮ್ಮೆ ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (H D Revanna) ಕಿಡಿಕಾರಿದ್ದಾರೆ.
ಮಾ.13 ರಂದು ಹಾಸನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವಿಮಾನ ನಿಲ್ದಾಣದ ಫೈಲ್ ಅನ್ನು ತಡೆ ಹಿಡಿಯಲು ಹಿರಿಯರೊಬ್ಬರು 5 ಕೋಟಿ ರೂಪಾಯಿ ಪಡೆದಿದ್ದಾರೆ. ವಿಮಾನ ನಿಲ್ದಾಣದ ಭೂಮಿಯಲ್ಲಿ 290 ಎಕರೆ ಖರಾಬು ಭೂಮಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯ ಕೆಲಸ ಇನ್ನೂ ಇದೆ, ಆಗಲೇ ಉದ್ಘಾಟನೆಗೆ ಮಾಡಲು ಹೊರಟಿದ್ದಾರೆ. ಹಾಸನದ ಐಬಿ ನಾನೇ ಮಾಡಿಸಿಕೊಟ್ಟಿದ್ದು, ತಾಲೂಕು ಕಚೇರಿ, ಜಿಲ್ಲಾ ಕಚೇರಿ ಶುರುವಾಗಿ ಆರು ತಿಂಗಳಾಗಿದೆ. ಅದಕ್ಕೆ ಈಗ ಅಡಿಗಲ್ಲು ಹಾಕುತ್ತಿದ್ದಾರೆ ಎಂದ ಅವರು, ಹೊಸ ಕಾಮಗಾರಿ ಇದ್ದರೆ ಅಡಿಗಲ್ಲು ಹಾಕಿಕೊಳ್ಳಲಿ. ಬೇಕಿದ್ದರೆ ಹಾರ್ಟಿಕಲ್ಚರ್ ಕಾಲೇಜಿಗೆ ಅಡಿಗಲ್ಲು ಹಾಕಲಿ, ಆದರೆ, ದೇವೇಗೌಡರು ಅಡಿಗಲ್ಲು ಹಾಕಿರುವುದಕ್ಕೆ ಮತ್ತೆ ಅಡಿಗಲ್ಲು ಹಾಕುತ್ತಿದ್ದಾರೆ. ಇದನ್ನು ಖಂಡಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | V. Somanna: ಪಕ್ಷ ಬಿಡಲು ಮುಂದಾಗಿರುವ ಸಚಿವ ವಿ. ಸೋಮಣ್ಣ ಜತೆ ಮಾತುಕತೆ: ಬಿ.ಎಸ್. ಯಡಿಯೂರಪ್ಪ ಹೇಳಿಕೆ
ಇಲ್ಲಿಯವರೆಗೂ ತಾಳ್ಮೆಯಿಂದ ಇದ್ದೇವೆ. ಚುನಾವಣೆ ಸಮೀಪದಲ್ಲಿದೆ ಎಂದು ಹೀಗೆ ಮಾಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಹಿಂದಿನ ಚೆಕ್‌ಗಳಿಗೆ ಈಗ ದಿನಾಂಕ ಹಾಕಿ ಕೊಡುತ್ತಿದ್ದಾರೆ. ಇಂತಹ ಕೆಲಸಗಳ ಮೂಲಕ ಮುಖ್ಯಮಂತ್ರಿ ಹುದ್ದೆಯ ಮರ್ಯಾದೆ ಹಾಳು ಮಾಡಿಕೊಳ್ಳಬೇಡಿ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದಾರೆ.
48 ಮದ್ಯದಂಗಡಿ ಕೊಟ್ಟಿರುವುದೇ ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ, ಒಂದು ಲೈಸೆನ್ಸ್ ನೀಡಲು 60 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ. ಸಾಯಂಕಾಲ ಸುಖ ನಿದ್ದೆ ಮಾಡಲು ಮದ್ಯದಂಗಡಿ ತೆರೆದಿದ್ದೇವೆ ಎಂದು ಗಂಧದ ಮರದಲ್ಲಿ ಒಂದು ಬೋರ್ಡ್ ಮಾಡಿಸಿ ಹಾಕಿ ಎಂದ ಅವರು, ಮದ್ಯದಂಗಡಿ ಕೊಟ್ಟಿದ್ದೇವೆ ಎಂದು ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಅಡಿಗಲ್ಲು ಹಾಕಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | HD Revanna: ಎಚ್.ಡಿ. ರೇವಣ್ಣ ಜತೆ ಎಚ್.ಪಿ. ಸ್ವರೂಪ್ ಗೌಪ್ಯ ಚರ್ಚೆ; ಬಗೆಹರಿಯಲಿದೆಯಾ ಟಿಕೆಟ್ ಗೊಂದಲ?
2023ಕ್ಕೆ ಬಿಜೆಪಿ ಇರುತ್ತೋ ಇರಲ್ಲವೋ, 140 ಸೀಟ್ ಬರೋರು ಯಾಕೆ ಹೆದರಬೇಕು. ಹೊಳೆನರಸೀಪುರದ ಪೊಲೀಸ್ ಸ್ಟೇಷನ್‌ಗೆ ಇಲ್ಲಿ ಅಡಿಗಲ್ಲು ಹಾಕಬೇಕಾ? ಗೋಪಾಲಯ್ಯ ಬೇಡ ಎಂದರೂ ಕಲ್ಲು ಬೀಳಬೇಕು ಎನ್ನುತ್ತಾರಂತೆ ಕೆಲವರು ಎಂದು ಪರೋಕ್ಷವಾಗಿ ಶಾಸಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಮಗಾರಿಗಳಿಗೆ ಮತ್ತೊಮ್ಮೆ ಅಡಿಗಲ್ಲು ಹಾಕಿದರೆ ನಾವು ಸುಮ್ಮನಿರಲ್ಲ, ಉಗ್ರವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.