ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಈ ಮಧ್ಯೆ ಹಾಸನ ವಿಧಾನಸಭಾ ಕ್ಷೇತ್ರವು ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಅದರಲ್ಲೂ ಜೆಡಿಎಸ್ ಟಿಕೆಟ್ ಬಗ್ಗೆ ಕಳೆದ ಒಂದೆರೆಡು ತಿಂಗಳಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ ಎಚ್.ಪಿ. ಸ್ವರೂಪ್ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಗೌಪ್ಯ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಎಚ್.ಪಿ. ಸ್ವರೂಪ್ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ನಡುವೆ ಟಿಕೆಟ್‌ಗಾಗಿ ಕಿತ್ತಾಟ ನಡೆಸುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಈಗಾಗಲೇ ಇಬ್ಬರೂ ಸಹ ಒಂದು ಸುತ್ತು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ವರೂಪ್ ಪರ ನಿಂತಿದ್ದಾರೆ. ಇನ್ನು ಭವಾನಿ ಪತಿ ಎಚ್.ಡಿ. ರೇವಣ್ಣ ಪತ್ನಿ ಪರ ಇದ್ದಾರೆ. ಈ ಮಧ್ಯೆ ಯಾವುದೇ ಕಾರಣಕ್ಕೂ ಕುಟುಂಬದವರಿಗೆ ಕೊಡುವುದಿಲ್ಲ, ಸ್ವರೂಪ್‌ಗೆ ಕೊಡುವುದು ಎಂದು ಎಚ್‌ಡಿಕೆ ಹೇಳಿಕೆ ನೀಡಿದ್ದರು. ಈ ಸಂಬಂಧ ಎರಡೆರಡು ಬಾರಿ ಸಭೆ ನಡೆಸಿ ಘೋಷಣೆ ಮಾಡಲು ಮುಂದಾಗಿದ್ದಾಗಲೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮಧ್ಯ ಪ್ರವೇಶ ಮಾಡಿ ಸಭೆಯನ್ನು ಮುಂದೂಡಿದ್ದರು. ಈಗ ಪಂಚರತ್ನ ಯಾತ್ರೆ ಗುರುವಾರ (ಮಾ. 9) ಹಾಸನ ಜಿಲ್ಲೆಯನ್ನು ಪ್ರವೇಶ ಮಾಡುತ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಎಚ್.ಡಿ. ರೇವಣ್ಣ ಅವರು ಸ್ವರೂಪ್‌ರನ್ನು ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಕರೆಸಿಕೊಂಡು ರಹಸ್ಯ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: Bike taxi service : ಬೈಕ್ ಟ್ಯಾಕ್ಸಿ ಡ್ರೈವರ್‌ನ ಮೇಲೆ ಏರಿ ಹೋದ ಆಟೋ ಚಾಲಕ, ಫೋನ್ ಎಸೆದು ಹಾನಿ: ವಿಡಿಯೊ ವೈರಲ್
ಎಚ್.ಡಿ. ರೇವಣ್ಣ ಭೇಟಿ ಬಳಿಕ ಹೊರಗೆ ಬಂದ ಎಚ್.ಪಿ. ಸ್ವರೂಪ್ ಮಾತನಾಡಿ, ರೇವಣ್ಣ ಅವರನ್ನು ಭೇಟಿಯಾಗದೇ ಹತ್ತು ದಿನಗಳೇ ಕಳೆದಿದ್ದವು. ಅವರು ನಮ್ಮ ಪಕ್ಷದ ವರಿಷ್ಠರು. ಹೀಗೇ ಸಾಮಾನ್ಯವಾಗಿ ಚರ್ಚೆ ನಡೆಸಲು ಕರೆದಿದ್ದರು. ಹೊಸತು ಏನನ್ನೂ ಚರ್ಚೆ ಮಾಡಿಲ್ಲ. ಪಂಚರತ್ನ ಯಾತ್ರೆ ಬಗ್ಗೆ ಮಾತನಾಡಿದ್ದೇವೆ. ಅದರ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ನಾವು ಟಿಕೆಟ್ ವಿಚಾರವನ್ನು ಮಾತನಾಡಿಯೇ ಇಲ್ಲ. ಅದನ್ನು ದೊಡ್ಡವರೆಲ್ಲರೂ ಕುಳಿತು ಮಾತನಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅರ್ಧ ಗಂಟೆ ಕಾಲ ಚರ್ಚೆ
ಟಿಕೆಟ್ ವಿಚಾರವನ್ನು ಮಾತನಾಡಿಯೇ ಇಲ್ಲ ಎಂದು ಸ್ವರೂಪ್ ಹೇಳಿಕೆ ನೀಡಿದ್ದರೂ, ಚರ್ಚೆ ವೇಳೆ ಅದರ ಬಗ್ಗೆಯೇ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಭೇಟಿಯ ಫಲಶೃತಿ ಮಾತ್ರ ಇನ್ನೂ ಗೊತ್ತಾಗಿಲ್ಲ. ಹಾಸನ ಟಿಕೆಟ್ ಸ್ವರೂಪ್‌ಗೆ ಸಿಗಲಿದೆಯೇ? ಅಥವಾ ಭವಾನಿಗಾ? ಎಂಬ ಅಂಶವು ಮಾತ್ರ ಇನ್ನೂ ಗೌಪ್ಯವಾಗಿಯೇ ಇದೆ.
ಇದನ್ನೂ ಓದಿ: International womens day-2023: ಮಹಿಳೆಯರನ್ನು ಪುರುಷರೂ ಅರ್ಥ ಮಾಡಿಕೊಳ್ಳಬೇಕು ಎಂದ ಸಿಎಂ ಬೊಮ್ಮಾಯಿ
ಅರ್ಧ ಗಂಟೆಗೂ ಹೆಚ್ಚು ಕಾಲ ರೇವಣ್ಣ ಜತೆ ಸ್ವರೂಪ್ ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಮಾ. 9ರಿಂದ ಪಂಚರತ್ನ ಯಾತ್ರೆ ಪ್ರವಾಸವನ್ನು ಎಚ್.ಡಿ. ಕುಮಾರಸ್ವಾಮಿ ಕೈಗೊಳ್ಳಲಿದ್ದಾರೆ. ಈ ವೇಳೆ ಟಿಕೆಟ್ ಗೊಂದಲ ಎಲ್ಲಿಯೂ ಸಮಸ್ಯೆಯಾಗಬಾರದು. ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡೋಣ. ಅದಕ್ಕೆ ಸ್ವರೂಪ್ ಸಹ ಸಹಜವಾಗಿಯೇ ಭಾಗವಹಿಸಬೇಕು ಎಂಬ ನಿಟ್ಟಿನಲ್ಲಿ ರೇವಣ್ಣ ಮಾತುಕತೆಗೆ ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಟಿಕೆಟ್ ಗೊಂದಲ ಬದಿಗಿಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರನ್ನೂ ಒಗ್ಗೂಡಿಸಲು ರೇವಣ್ಣ ಮುಂದಾಗಿದ್ದಾರೆ.