ಬೆಂಗಳೂರು: ಜೆಡಿಎಸ್ ಹಾಸನ ಟಿಕೆಟ್ ಗೊಂದಲ ಹಿನ್ನೆಲೆಯಲ್ಲಿ ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಸೋಮವಾರ ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆಯಿತು. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆಯ ಬೆನ್ನಲ್ಲೇ ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆದಿದೆ. ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಎಚ್.ಪಿ. ಸ್ವರೂಪ್ ಪರ ಎಚ್.ಡಿ. ಕುಮಾರಸ್ವಾಮಿ ಒಲವು ತೋರಿದ್ದಾರೆ. ಹೀಗಾಗಿ ಟಿಕೆಟ್ (Karnataka Election 2023) ಗೊಂದಲು ಬಗೆಹರಿಸಲು ಸ್ವತಃ ದೇವೇಗೌಡರೇ ಮುಂದಾಗಿದ್ದಾರೆ.
ಈ ಹಿಂದೆ ಹಾಸನ ಟಿಕೆಟ್ ಬಗ್ಗೆ ಚರ್ಚಿಸಲು ಸಭೆ ನಡೆಸಲು ಮುಂದಾಗಿದ್ದ ಎಚ್‌ಡಿಕೆ ನಡೆಗೆ ದೇವೇಗೌಡರು ಬ್ರೇಕ್ ಹಾಕಿದ್ದರು. ಆರೋಗ್ಯ ಸುಧಾರಿಸಿದ ಬಳಿಕ ಸ್ವತಃ ತಾವೇ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ದೇವೇಗೌಡರು ಕರೆದಿದ್ದ ಸಭೆಯಲ್ಲಿ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಬೇಲೂರು ಶಾಸಕ ಲಿಂಗೇಶ್, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗೈರಾಗಿದ್ದರು.
ಇದನ್ನೂ ಓದಿ | BY Vijayendra: ದೆಹಲಿವರೆಗೆ ದೂರು ಹೋದರೆ ಆ ವ್ಯಕ್ತಿ ಎತ್ತರಕ್ಕೆ ಬೆಳೆದಿದ್ದಾನೆಂದು ಅರ್ಥ; ವಿಜಯೇಂದ್ರ ಹೇಳಿದ್ದು ಯಾರಿಗೆ?
ದೇವೆಗೌಡರ ಸಭೆ ಬಳಿಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದೆ. ಜಿಲ್ಲೆಯ 7ಕ್ಕೆ 7 ಕ್ಷೇತ್ರ ಗೆಲ್ಲುವುದಕ್ಕೆ ದೇವೆಗೌಡರು ಸಲಹೆ, ಸೂಚನೆ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ಗೆಲ್ಲುವುದಕ್ಕೆ ಎಲ್ಲರ ಮಾರ್ಗದರ್ಶನ ಪಡೆದಿದ್ದೇವೆ ಎಂದು ಹೇಳಿದರು.
ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳೆದ ಬಾರಿ ಕಾಂಗ್ರೆಸ್ ಲೆಕ್ಕಾಚಾರದಿಂದ ಹಾಸನದಲ್ಲಿ ಸೋತೆವು. ಇಲ್ಲದಿದ್ದರೆ 7ಕ್ಕೆ 7 ಕ್ಷೇತ್ರಗಳಲ್ಲೂ ಗೆಲ್ಲುತ್ತಿದ್ದೆವು. ನಮಗೆ ಪಕ್ಷ ಮುಖ್ಯ, ಟಿಕೆಟ್ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ. ದೇವೇಗೌಡರು ಏನು ಹೇಳುತ್ತಾರೋ ಅದೇ ಫೈನಲ್. ಇನ್ನೊಂದು ವಾರದಲ್ಲಿ ಎಲ್ಲ ಗೊತ್ತಾಗುತ್ತದೆ. ಹಾಸನದಲ್ಲಿ ಯಾವುದೇ ಗೊಂದಲವಿಲ್ಲ. ಅಲ್ಲಿಯೂ ಜೆಡಿಎಸ್ ಬರುತ್ತದೆ, ರಾಜ್ಯದಲ್ಲೂ ಜೆಡಿಎಸ್ ಬರುತ್ತದೆ ಎಂದು ತಿಳಿಸಿದರು.
ಕುಮಾರಣ್ಣ ಕೊಟ್ಡ ಎಲ್ಲ ಯೋಜನೆಗಳನ್ನು ಈ ಸರ್ಕಾರ ತಡೆ ಹಿಡಿದಿದೆ. ಹಾಸನದ 4 ಸಾವಿರ ಕೋಟಿ ಯೋಜನೆಯನ್ನು ತಡೆ ಹಿಡಿದಿದ್ದಾರೆ. ಕುಮಾರಸ್ವಾಮಿ ರಾಜ್ಯಾದ್ಯಂತ ಹಗಲು ರಾತ್ರಿ ರಥಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿಯಲ್ಲಿ ಡಜನ್ ನಾಯಕರಿದ್ದಾರೆ. ಆದರೆ, ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಒಬ್ಬರೇ ಇರುವುದು ಎಂದು ಹೇಳಿದರು.
ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ. ಕಾಂಗ್ರೆಸ್, ಬಿಜೆಪಿ ಮೊದಲು ಪಟ್ಟಿ ಬಿಡುಗಡೆ ಮಾಡಲಿ, ಆಮೇಲೆ ನಾವು ಮಾಡುತ್ತೇವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಎನ್ನುತ್ತಿದ್ದಾರೆ. ಇವರು ಯಾರಿಗೆ ಗ್ಯಾರಂಟಿ ಕೊಟ್ಟಿದ್ದಾರೆ. ಅವರು ಗ್ಯಾರಂಟಿ ಕೊಟ್ಟು ದೇಶದಲ್ಲಿ ಏನಾಗಿದೆ ಅಂತ ಗೊತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | BJP Karnataka: ಕಾಂಗ್ರೆಸ್ ವಿರುದ್ಧ ದತ್ತಾಂಶ ಕಳವು ಆರೋಪ ಮಾಡಿದ ಬಿಜೆಪಿ: ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು-ಮೈಸೂರು ಹೆದ್ದಾರಿ ಮಾಡಿದ್ದು ನಾವೇ ಎಂದು ಬಿಜೆಪಿಯವರು ಹೇಳುತ್ತಾರೆ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಶೇ.85 ಭೂಸ್ವಾಧೀನ ಮಾಡಿಕೊಟ್ಟಿದ್ದೆ. ನಾನು ಭೂ ಸ್ವಾಧೀನ ಮಾಡದೇ ಇದ್ದಿದ್ದರೆ ಏನಾಗುತ್ತಿತ್ತು. ಇವತ್ತು ಪ್ರತಾಪ್ ಸಿಂಹ ನಾನೇ ಎಲ್ಲಾ ಮಾಡಿದ್ದೇನೆ ಎನ್ನುತ್ತಾರಲ್ಲ, ಆವತ್ತು ಇವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಉರಿಗೌಡ, ನಂಜೇಗೌಡ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಒಕ್ಕಲಿಗರಿಗೆ ಹೊಟ್ಟೆಗೆ ಹಿಟ್ಟು ಕೊಟ್ಟರೆ ಸಾಕು, ಇದೊಂದು ಕಲ್ಪನೆ ಅಷ್ಟೆ. ಇಲ್ಲಿವರೆಗೆ ಇಲ್ಲದೇ ಹೋದದ್ದು ಈಗ ಯಾಕೆ ಬಂತು? ಮಾನ ಮರ್ಯಾದೆ ಇದ್ದರೆ ಹೀಗೆ ಮಾತನಾಡಬಾರದು ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.