Site icon Vistara News

Election 2023| 100 ಅಭ್ಯರ್ಥಿಗಳ ಮೊದಲ ಪಟ್ಟಿಗೆ ‌ಮಧ್ಯರಾತ್ರಿ ಬ್ರೇಕ್‌, ರೇವಣ್ಣ ನಮ್ಮ ಪಕ್ಷದ ಜೋತಿಷಿ ಎಂದು ಎಚ್‌ಡಿಕೆ ಹೇಳಿದ್ದೇಕೆ?

HD Revanna JDS candidates list

ಬೆಂಗಳೂರು: ಪಂಚ ರತ್ನ ಯಾತ್ರೆಯ ಆರಂಭದೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಗಾಗಿ (Election 2023) ೧೦೦ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಜೆಡಿಎಸ್‌ ಎಲ್ಲ ರೀತಿಯಲ್ಲೂ ರೆಡಿ ಆಗಿತ್ತು. ಆದರೆ, ಎಚ್‌.ಡಿ. ರೇವಣ್ಣ ಅವರು ಈ ಪಟ್ಟಿ ಬಿಡುಗಡೆಗೆ ಬ್ರೇಕ್‌ ಹಾಕಿದ್ದಾರೆ!

೧೦೦ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಗುರುವಾರ ರಾತ್ರಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ. ದೇವೇಗೌಡರ ಜತೆ ಚರ್ಚೆ ನಡೆಸಿದ್ದರು. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಅಭ್ಯರ್ಥಿ ಘೋಷಣೆ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಕುಮಾರಸ್ವಾಮಿ ಪ್ಲ್ಯಾನ್‌ ಮಾಡಿದ್ದರು. ದೇವೇಗೌಡರು ಕೂಡಾ ಅದಕ್ಕೆ ಒಪ್ಪಿದ್ದರು. ಆದರೆ, ಎಚ್‌.ಡಿ. ರೇವಣ್ಣ ಅವರು ಮಧ್ಯರಾತ್ರಿಯೇ ಇದಕ್ಕೆ ಬ್ರೇಕ್‌ ಹಾಕಿದ್ದರು. ಯಾವ ಕಾರಣಕ್ಕೂ ಈಗ ಪಟ್ಟಿ ಬಿಡುಗಡೆ ಮಾಡಬಾರದು ಎಂದು ಅವರು ತಾಕೀತು ಮಾಡಿದರು ಎನ್ನಲಾಗಿದೆ.
ಈಗ ಪಟ್ಟಿ ಬಿಡುಗಡೆ ಮಾಡಿದರೆ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಎಚ್ಡಿಕೆ ಮತ್ತು ಎಚ್ ಡಿ ದೇವೇಗೌಡರು ಹೇಳಿದರೂ ರೇವಣ್ಣ ಕೇಳಲಿಲ್ಲ ಎನ್ನಲಾಗಿದೆ. ಪಟ್ಟಿ ಬಿಡುಗಡೆ ಈಗಲೇ ಬೇಡ ಎಂದು ಹಠ ಹಿಡಿದರೆನ್ನಲಾಗಿದೆ.

ಹಾಗಿದ್ದರೆ ತಡೆ ಹಿಡಿದದ್ದು ಯಾಕೆ ಎನ್ನುವ ಪ್ರಶ್ನೆಗೆ ಸ್ವತಃ ಕುಮಾರಸ್ವಾಮಿ ಅವರೇ ಉತ್ತರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ರೇವಣ್ಣ ಅವರು ಪಟ್ಟಿ ಬಿಡುಗಡೆಯನ್ನು ತಡೆ ಹಿಡಿದಿದ್ದಾರೆ ಎನ್ನುವುದನ್ನು ಖಚಿತಪಡಿಸಿದರು.

ʻʻರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಇಂದು ಪಟ್ಟಿ ಬಿಡುಗಡೆಗೆ ಸಮಯ ಪ್ರಸಕ್ತವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ. 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್‌.ಡಿ‌ ದೇವೇಗೌಡರ ನೇತೃತ್ವದಲ್ಲಿ ಬಿಡುಗಡೆ ಮಾಡುತ್ತಾರೆʼʼ ಎಂದು ಕುಮಾರಸ್ವಾಮಿ ಹೇಳಿದರು.

ಈ ನಡುವೆ, ಎಚ್‌.ಡಿ ರೇವಣ್ಣ ಅವರಿಗೆ ಪಟ್ಟಿಯ ಬಗ್ಗೆ ಆಕ್ಷೇಪವೂ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ತಡೆ ಹಿಡಿದರು ಎಂಬ ಮಾಹಿತಿಯೂ ಇದೆ. ಆದರೆ, ಅಧಿಕೃತವಾಗಿಯೇ ಹೇಳುವುದಾದರೆ ಪಟ್ಟಿ ಬಿಡುಗಡೆಗೆ ಶುಕ್ರವಾರ ಮುಹೂರ್ತ ಸರಿ ಇಲ್ಲ!

ಇದನ್ನೂ ಓದಿ | Shelter gumbaz | ಕಣ್ಣೀರು ಹಾಕದಂತೆ ಶಾಸಕ ರಾಮದಾಸ್‌ಗೆ ಸಲಹೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ!

Exit mobile version