ಕಾರವಾರ: ಬೈಕನ್ನು ಒಂದು ರೌಂಡ್ ಓಡಿಸಿ ನೋಡ್ಲಾ ಎಂದು ಕೇಳಿದ ಚಾಲಾಕಿಯೊಬ್ಬ ಬೈಕನ್ನು ಓಡಿಸಿಕೊಂಡು ಹೋಗಿ ಕಣ್ಮರೆಯಾಗಿರುವ ಘಟನೆ (Bike theft) ಅಂಕೋಲಾದ ಬಾಳೆಗುಳಿಯಲ್ಲಿ ನಡೆದಿದೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
ಪಟ್ಟಣದ ನಿವಾಸಿ ಅರವಿಂದ ತಾಂಡೇಲ ಎಂಬ ಯುವಕ ಕಳೆದ ವಾರವಷ್ಟೇ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ನೀಡಿ ನೂತನ ಕೆಟಿಎಂ ಬೈಕ್ ಖರೀದಿಸಿದ್ದರು. ಸಂಬಂಧಿಕರೊಬ್ಬರ ಬೈಕ್ ರಿಪೇರಿಗೆಂದು ಹೆದ್ದಾರಿಗೆ ಹೊಂದಿಕೊಂಡಿರುವ ಯಮಹಾ ಶೋರೂಂಗೆ ಬಂದಿದ್ದು ಹೊರಗೆ ಬೈಕ್ ನಿಲ್ಲಿಸಿದ್ದರು.
ಈ ವೇಳೆ ಶೋರೂಂ ಬಳಿ ಬೈಕ್‌ನಲ್ಲಿ ಬಂದ ಆಸಾಮಿಯೊಬ್ಬ ದುಬಾರಿ ಬೈಕ್ ನೋಡಿ ಆಸಕ್ತಿಯಿಂದ ಪರಿಶೀಲಿಸಿದ್ದಾನೆ. ಅರವಿಂದನಿಗೂ ತನ್ನ ಬೈಕನ್ನು ಯಾರೋ ಒಬ್ಬರು ಭಾರಿ ಕುತೂಹಲದಿಂದ ಪರಿಶೀಲಿಸುತ್ತಿರುವುದು ಖುಷಿ ಕೊಟ್ಟಿದೆ.
ಅರವಿಂದ ಶಾಪ್‌ನಿಂದ ಹೊರಟು ಬೈಕ್‌ನ ಹತ್ತಿರ ಬರುವವರೆಗೆ ಕಾದ ಆತ ಇನ್ನೇನು ಅರವಿಂದ ತನ್ನ ಬೈಕ್‌ನಲ್ಲಿ ಹೊರಡುತ್ತಿದ್ದ ವೇಳೆ ಆತನೊಂದಿಗೆ ಮಾತಿಗಿಳಿದಿದ್ದಾನೆ. ತಾನೂ ಸಹ ಕೆಟಿಎಂ ಬೈಕ್ ಖರೀದಿಸಬೇಕೆಂದಿದ್ದೇನೆಂದ ಆತ ಬೈಕ್ ಬೆಲೆ, ಫೀಚರ್‌ಗಳ ಕುರಿತು ವಿಚಾರಿಸಿದ್ದಾನೆ.
ಹೀಗೆ ಮಾತನಾಡುತ್ತಾ ಒಂದು ಬಾರಿ ಟ್ರಯಲ್ ಓಡಿಸಿ ನೋಡುವುದಾಗಿ ಬೈಕ್ ಕೊಡುವಂತೆ ಕೇಳಿದ್ದು ತನ್ನ ಬೈಕ್ ಕೀ ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ಕಳ್ಳನ ಮಾತು ನಂಬಿದ ಅರವಿಂದ ಬೈಕ್ ನೀಡಿದ್ದು ಬಳಿಕ ಅಲ್ಲಿಯೇ ಕಾದು ನಿಂತಿದ್ದಾನೆ.
ಆದರೆ ಬೈಕ್ ಪಡೆದುಕೊಂಡು ಹೋದ ಆಸಾಮಿ ಎಷ್ಟು ಹೊತ್ತು ಕಳೆದರೂ ವಾಪಸ್ಸಾಗಿಲ್ಲವಾಗಿಲ್ಲ! ಈ ವೇಳೆ ಯುವಕನಿಗೆ ತಾನು ಬೈಕ್ ಕಳೆದುಕೊಂಡಿದ್ದು ಅರಿವಿಗೆ ಬಂದಿದೆ. ಈ ವೇಳೆ ಕಳ್ಳನ ಬೈಕ್ ತೆಗೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಲ್ಲಿಸಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Shimoga News | 3.8 ಕೋಟಿ ರೂ. ಮೌಲ್ಯದ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು