ತುಮಕೂರು: ಹೆಡ್ ಬುಷ್ ಸಿನಿಮಾದಲ್ಲಿ (Head Bush) ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪವು ಚಿತ್ರತಂಡದ ಮೇಲೆ ಕೇಳಿಬಂದಿದ್ದರಿಂದ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ತಿಪಟೂರು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ನಾಯಕ ನಟ ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ, ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಭಜರಂಗದಳ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದ್ದು, ವೀರಗಾಸೆಗೆ ಅದರದ್ದೇ ಆದ ಇತಿಹಾಸವಿದ್ದು, ಈ ಪರಂಪರೆಗೆ ಅಪಮಾನ ಮಾಡಲಾಗಿದೆ. ವೀರಗಾಸೆ ವೇಷಧಾರಿಯಲ್ಲಿರುವಾಗಲೇ ಆ ಪಾತ್ರದಾರಿಗೆ ನಾಯಕ ನಟ ಕಾಲಿನಿಂದ ಒದ್ದು ಅವಮಾನ ಮಾಡಿದ್ದಾರೆ. ಇದು ಅಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಮೇಲೆ ಸೂಕ್ತ ಕ್ರಮವಹಿಸಬೇಕು. ಜತೆಗೆ ಚಿತ್ರದಲ್ಲಿ ಆ ದೃಶ್ಯವನ್ನು ಕತ್ತರಿಸಬೇಕು. ಇಲ್ಲದಿದ್ದರೆ ಮತ್ತಷ್ಟು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಪ್ರತಿಭಟನೆ
ಹೆಡ್ ಬುಷ್ ಚಿತ್ರತಂಡದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಹಿಂದು ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿರುವ ದೃಶ್ಯವನ್ನು ಕತ್ತರಿಸಬೇಕು. ಇಲ್ಲವೇ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ | Head Bush Movie | ʻನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲʼ: ಕ್ಷಮೆ ಕೇಳಿದ ʻಹೆಡ್ ಬುಷ್ʼ ತಂಡ!
ವಿಜಯನಗರ ಡಾಲಿ ಪರ ಅಭಿಯಾನ
ಒಂದೆಡೆ ಹೆಡ್ ಬುಷ್ ಚಿತ್ರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್ ಪರ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ. “ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ” ಎಂದು ಡಾಲಿ ಫೋಟೊ ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಹಲವರು ತಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್ ಪ್ರೊಫೈಲ್ ಫೋಟೊ ಚೇಂಜ್ ಮಾಡಿರುವ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ.
ಡಾಲಿ ಧನಂಜಯ್ ಪ್ರಗತಿಪರ ಚಿಂತನೆ ಹೊಂದಿದ್ದಾರೆ. ಡಾಲಿಯನ್ನು ತುಳಿಯುವ ಪ್ರಯತ್ನ ಮಾಡಬಾರದು. ಅವರು ಕಷ್ಟ ಅನುಭವಿಸಿ ಮೇಲೆ ಬಂದಿದ್ದಾರೆ. ಅಪ್ಪಟ ಅಂಬೇಡ್ಕರ್ ವಾದಿಯಾಗಿರುವ ಅವರು ಮನುಷ್ಯವಾದಿಯೂ ಹೌದು. ಹೆಡ್ ಬುಷ್ ಚಿತ್ರದ ಕುರಿತು ಅಪಪ್ರಚಾರ ನಿಲ್ಲಿಸಬೇಕು ಎಂದು ಫೇಸ್ ಬುಕ್‌ನಲ್ಲಿ ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ.
ಜನಪದ ಕಲೆಯನ್ನು ಗೌರವಿಸಬೇಕು- ಸಚಿವ ಸುನಿಲ್ ಕುಮಾರ್
ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ, ಜನಪದಕ್ಕೆ ಅಪಮಾನ ಮಾಡಿರುವ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ವರದಿಯಾಗಿದೆ. ನಮ್ಮ ರಾಜ್ಯದ, ದೇಶದ ಯಾವುದೇ ಜನಪದ ಕಲೆಯನ್ನು ಗೌರವಿಸಬೇಕಾಗಿದೆ. ಮನರಂಜನೆ ನೆಪದಲ್ಲಿ ಜಾನಪದ ಕಲೆ, ಸಂಸ್ಕೃತಿಗೆ ಅಪಮಾನ ಮಾಡಬಾರದು. ಈ ಚಲನಚಿತ್ರದಲ್ಲಿ ಅಪಮಾನ ಮಾಡಿದ್ದು ಕಂಡು ಬಂದರೆ ಆ ಚಿತ್ರ ತಂಡ ಮರು ಚಿಂತನೆ ಮಾಡಬೇಕಾಗಿದೆ. ಅಪಮಾನ ಆಗದಂತೆ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರ ತಂಡ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಫಿಲ್ಮ್ ಚೇಂಬರ್‌ನಲ್ಲಿ ಇತ್ಯರ್ಥ?
ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದಲ್ಲಿ ತಿಗಳರ ಪೇಟೆ ಕರಗ ಎಂದು ಬೇರೆ ಕರಗ ತೋರಿಸಿದ್ದಾರೆ ಎನ್ನುವ ದೂರು ಬಂದಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ. ಹರೀಶ್ ತಿಳಿಸಿದ್ದಾರೆ. ಈ ಕುರಿತು ಗುರುವಾರ (ಅ.೨೭) ವಾಣಿಜ್ಯ ಮಂಡಳಿಯಲ್ಲಿ ಚಿತ್ರತಂಡ ಮತ್ತು ಕರಗ ಸಮಿತಿ ಸದಸ್ಯರ ನಡುವೆ ಮಾತುಕತೆ ನಡೆಸಲಿದ್ದು, ಸಮಸ್ಯೆ ಇತ್ಯರ್ಥ ಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಚಿತ್ರದಲ್ಲಿ ಕರಗದ ಶಿವಶಂಕರ್ ಅವರನ್ನು ಏಕವಚನದಲ್ಲಿ ಸಂಭೋದನೆ ಮಾಡಿರುವುದು, ಕರಗ ಜುಜುಬಿ ಎಂದು ಹೇಳಿರುವುದರಿಂದ ಅಪಮಾನ ಆಗಿದೆ ಎಂದು ವಾಣಿಜ್ಯ ಮಂಡಳಿಗೆ ಕರಗ ಸತೀಶ್ ದೂರು ನೀಡಿದ್ದರು. ನಟ ಡಾಲಿ ಧನಂಜಯ್, ಅಗ್ನಿ ಶ್ರೀಧರ್ ಹಾಗೂ ಕರಗ ಸಮಿತಿ ಸದಸ್ಯರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ | Head Bush | ವೀರಗಾಸೆಗೆ ಅಪಮಾನ; ಚಿತ್ರ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿರಿಯೂರು ಠಾಣೆಗೆ ದೂರು