ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ (Head Bush Movie) ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರದ ಒಂದು ದೃಶ್ಯದ ಬಗ್ಗೆ ಅಪಸ್ವರ ಎದ್ದಿದೆ. ವೀರಶೈವರ ಸಾಂಪ್ರದಾಯಿಕ ಕುಣಿತವಾಗಿರುವ ವಿರಗಾಸೆಗೆ ಅಪಮಾನ ಮಾಡಲಾಗಿದೆ. ಕೂಡಲೇ ಆ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ ಹೆಡ್ ಬುಷ್ (#BoycottHeadBush) ಅಭಿಯಾನ ಪ್ರಾರಂಭವಾಗಿದೆ.
ಸಿನಿಮಾದಲ್ಲಿ ವೀರಶೈವರ ವಿರಾಗಾಸೆ ಕುಣಿತದ ಸನ್ನಿವೇಶವಿದೆ. ಈ ವೀರಗಾಸೆ ವೇಷ ಹಾಕಿದ್ದ ಪಾತ್ರದಾರಿಗೆ ಅಂಡರ್‌ವರ್ಲ್ಡ್ ಡಾನ್ ಜಯರಾಜ್ ಪಾತ್ರಧಾರಿ ಡಾಲಿ ಧನಂಜಯ್ ಹೊಡೆದಿದ್ದು, ಕಾಲಿನಿಂದ ಒದ್ದು ಅಪಮಾನ ಮಾಡಿದ್ದಾರೆಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ತಗಾದೆ ತೆಗೆಯಲಾಗಿದೆ. ಈಗಾಗಲೇ ಟ್ವಿಟರ್‌ನಲ್ಲಿ “ಬಾಯ್‌ಕಾಟ್‌ಹೆಡ್‌ಬುಷ್_ಮೂವಿ” ಎಂಬ ಹ್ಯಾಷ್‌ಟ್ಯಾಗ್‌ನಡಿ ಅಭಿಯಾನ ಆರಂಭಗೊಂಡಿದೆ.
ಡಾಲಿ ಧನಂಜಯ್ ಸ್ಪಷ್ಟೀಕರಣ
ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಹಾಗೂ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ ಧನಂಜಯ್, ನಾನು ಯಾವುದೇ ರೀತಿಯಲ್ಲೂ ಅಪಮಾನ ಮಾಡಿಲ್ಲ. ಸ್ವತಃ ನಾನು ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವೂ ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕಷವಾಗಿ ವಿಮರ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ.
ಆದರೆ, ಇದಕ್ಕೂ ನೆಟ್ಟಿಗರು ಸಮಾಧಾನಗೊಂಡಿಲ್ಲ. ಹೀಗಾಗಿ ಅಭಿಯಾನವನ್ನು ತೀವ್ರಗೊಳಿಸಿದ್ದು, ಸಿನಿಮಾ ಬಹಿಷ್ಕಾರಕ್ಕೆ ಕೆಲವರು ಒತ್ತಾಯಿಸಿದ್ದಾರೆ. ಮತ್ತೆ ಕೆಲವರು ಆ ದೃಶ್ಯವನ್ನು ಎಡಿಟ್ ಮಾಡುವಂತೆ ಆಗ್ರಹಿಸಿದ್ದಾರೆ.
ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ
ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಡಾಲಿ ಧನಂಜಯ್ ಬುಧವಾರ ಮಧ್ಯಾಹ್ನ ೨ ಗಂಟೆಗೆ ಬಸವೇಶ್ವರ ನಗರದಲ್ಲಿ ವೀರಗಾಸೆ ಕಲಾವಿದರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆಂಬ ಮಾಹಿತಿ ಬಂದಿದೆ.
ಇದನ್ನೂ ಓದಿ | Dolly Dhananjay | ʻಹೆಡ್ ಬುಷ್ʼ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?