Site icon Vistara News

Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

head bush

ಬೆಂಗಳೂರು: ಅಂಡರ್ವಲ್ಡ್‌ ಡಾನ್‌ ಜಯರಾಜ್‌ ಜೀವನ ವೃತ್ತಾಂತದ ಕಥಾ ಹಂದರ ಹೊಂದಿರುವ ಡಾಲಿ ಧನಂಜಯ್‌ ಅಭಿಯನಯದ ಹೆಡ್‌ ಬುಷ್‌ ಸಿನಿಮಾಕ್ಕೆ (Head Bush Movie) ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದ್ದು, ಕೂಡಲೇ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಲಾಗಿದೆ.

ವೀರಶೈವ ಪುರೋಹಿತ ಮಹಾಸಭಾ ದೂರು
ಹೆಡ್‌ ಬುಷ್‌ ಸಿನಿಮಾದಲ್ಲಿ ಬರುವ ಫೈಟಿಂಗ್‌ ಸನ್ನಿವೇಶವೊಂದರಲ್ಲಿ ಚಿತ್ರದ ನಾಯಕ ಡಾಲಿ ಧನಂಜಯ್‌ ಅವರು ವೀರಗಾಸೆ ಪಾತ್ರಧಾರಿಗೆ ಆ ವೇಷದಲ್ಲಿರುವಾಗಲೇ ಹೀನಾಯವಾಗಿ ಒದ್ದಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ. ಅಲ್ಲದೆ, ಇದು ಅಸಂಖ್ಯಾತ ಶ್ರೀ ವೀರಭದ್ರಸ್ವಾಮಿಯ ಆರಾಧಕರ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಇದನ್ನು ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಖಂಡಿಸುತ್ತದೆ. ಹೀಗಾಗಿ ಈ ಕೂಡಲೇ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಿ ಕ್ಷಮಾಪಣೆ ಕೋರಬೇಕಿದೆ. ಅಲ್ಲದೆ, ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಒತ್ತಾಯಿಸುತ್ತಾ ಶೀಘ್ರದಲ್ಲಿ ಸಂಬಂಧಿತ ಚಿತ್ರ ತಂಡದ ಮೇಲೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅಖಿಲ ಕರ್ನಾಕಟ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ವೇ. ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ, ಹಿರೇಕೆರೂರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | Head Bush Movie | ವೀರಶೈವ ಪರಂಪರೆಗೆ ಅಪಮಾನ ಆರೋಪ; #BoycottHeadBush ಅಭಿಯಾನ ಶುರು

ರಾಜ್ಯ ಕಲಾವಿದರ ಒಕ್ಕೂಟ ದೂರು
ಹೆಡ್‌ ಬುಷ್‌ ಸಿನಿಮಾದಲ್ಲಿ ವೀರಭದ್ರ ದೇವರ ಕುಣಿತ/ವೀರಗಾಸೆ ಕಲೆಯನ್ನು ದೇವರ ನಂಬಿಕೆಯಾಗಿ ಆಚರಿಸಲಾಗುತ್ತಾ ಬರಲಾಗಿದೆ. ಆದರೆ, ಈ ಚಿತ್ರದಲ್ಲಿ ದೇವರಿಗೆ ಹೊಡೆಯುವ, ಒದೆಯುವ ದೃಶ್ಯವಿದೆ. ಈ ಹಿನ್ನೆಲೆಯಲ್ಲಿ ನಟರಾದ ಲೂಸ್ ಮಾದ, ವಶಿಷ್ಠ ಸಿಂಹ, ದೇವರಾಜು, ನಿರ್ಮಾಪಕ, ನಟ ಡಾಲಿ ಧನಂಜಯ್, ಸೋಮಣ್ಣ ಹಾಗೂ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ ಮಾಡಲಾಗಿದೆ.

ದೂರಿನಲ್ಲೇನಿದೆ?
ಹಿಂದು ದೇವರಾದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಮೌಢ್ಯ ಕಟ್ಟುಪಾಡು ವಿರೋಧಿ, ಮಹಿಳಾ ಸಮಾನತೆಯ ಪ್ರವರ್ದಕರು ಹಾಗೂ ಅತ್ಯಂತ ಉಗ್ರ ಶಕ್ತಿ ದೇವರೆಂಬ ಧಾರ್ಮಿಕ ಇತಿಹಾಸವಿದೆ. ಸಮಾಜದಲ್ಲಿ ಸದರಿ ದೇವರ ಮಕ್ಕಳೆಂದು, ವಂಶಸ್ಥರೆಂದು ಇತ್ಯಾದಿ ರೂಪದಲ್ಲಿ ಪೂಜ್ಯ ಭಾವನೆಯಿಂದ ಗೌರವಿಸಲ್ಪಡುವ ಹಾಗೂ ಪೂಜಿಸಲು ಯೋಗ್ಯವಾಗಿರುವ ವೀರಭದ್ರ ದೇವರ ಕುಣಿತ/ವೀರಗಾಸೆ (ವಂಶ ಪಾರಂಪರಿಕ ವೃತ್ತಿ) ಕಲೆಯನ್ನು ಇತ್ತೀಚೆಗೆ ತೆರೆ ಕಂಡ ಹೆಚ್ಚು ಬುಷ್ ಚಲನಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ತೋರಿಸಲಾಗಿದೆ. ನಮ್ಮ ದೇವರಿಗೆ ಹೊಡೆಯುವ, ಕಾಲಿನಿಂದ ಒದೆಯುವ (ಕ್ರಿಮಿನಲ್/ವಿಲನ್ ಇತ್ಯಾದಿ) ದೃಶ್ಯಗಳನ್ನು ಕೆಟ್ಟ ರೀತಿಯಾಗಿ ಚಿತ್ರೀಕರಿಸಿ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದು, ಮಾನಸಿಕವಾಗಿ ನೋವುಂಟು ಮಾಡಲಾಗಿದೆ. ಈ ಮೂಲಕ ಮಾನ ನಷ್ಟ ಮಾಡಿದ್ದಾರೆ. ಹೀಗಾಗಿ ಚಿತ್ರತಂಡ ಮತ್ತು ನಟರ ಮೇಲೆ ಶಿಸ್ತು /ಕಾನೂನು ಕ್ರಮ ಕೈಗೊಂಡು ಕೂಡಲೇ ನ್ಯಾಯ ಕೊಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಸದರಿ ಚಲನಚಿತ್ರವನ್ನು ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಬಿಡಬಾರದು. ಇಲ್ಲದಿದ್ದರೆ ಉಗ್ರ ಹೊರಾಟ ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ.

ದೂರು ನೀಡಲು ಕರಗ ಸಮಿತಿ ಸಿದ್ಧತೆ
ಹೆಡ್ ಬುಷ್ ಚಿತ್ರದ ವಿರುದ್ಧ ಕರಗ ಸಮಿತಿಯಿಂದ ದೂರು ನೀಡಲು ಸಿದ್ಧತೆ ನಡೆದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಸಮಿತಿ ತಿಳಿಸಿದೆ. ಬೆಂಗಳೂರು ಕರಗ ಸಮಿತಿ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಬುಧವಾರ (ಅ.೨೬) ಮಧ್ಯಾಹ್ನ ೨ ಗಂಟೆಗೆ ವಾಣಿಜ್ಯ ಮಂಡಳಿ ದೂರು ನೀಡಲು ತಯಾರಿ‌ ನಡೆದಿದೆ.

ಇದನ್ನೂ ಓದಿ |Head Bush Review | ರಕ್ತ ಚರಿತ್ರೆ ಮೇಲೆ ರಾಜಕೀಯ ‘ಕಲೆ’: ಹೇಗಿದೆ ‘ಹೆಡ್ ಬುಷ್’ ಅಬ್ಬರ?

Exit mobile version