ಹಾಸನ: ಹಾಸನ ಜಿಲ್ಲೆಯಲ್ಲಿ ಡೆಂಗೆ (dengue fever) ಹಾಗೂ ಚಿಕೂನ್ ಗುನ್ಯಾ (chikungunya fever) ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ 85 ಡೆಂಘೆ, 35 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.
ರೋಗಿಗಳ ಸಂಖ್ಯೆ ಹೆಚ್ಚಳದಲ್ಲಿ ರಾಜ್ಯದಲ್ಲಿಯೇ ಹಾಸನ ಜಿಲ್ಲೆ 7ನೇ ಸ್ಥಾನದಲ್ಲಿ ಜಾಗ ಪಡೆದುಕೊಂಡಿದೆ. ಮೈಸೂರು ವಿಭಾಗದಲ್ಲಿ ಒಂದನೇ ಸ್ಥಾನದಲ್ಲಿದೆ ಎಂದು ಗೊತ್ತಾಗಿದೆ. ಹಾಸನ ಹಾಗೂ ಅರಸೀಕೆರೆ ತಾಲೂಕಿನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. 778 ರೋಗಿಗಳನ್ನು ತಪಾಸಣೆಗೆ ಒಳಪಡಿಸಿದಾಗ 85 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. 320 ರೋಗಿಗಳನ್ನು ತಪಾಸಣೆಗೊಳಪಡಿಸಿದಾಗ 35 ಜನರಲ್ಲಿ ಚಿಕೂನ್ ಗುನ್ಯಾ ದೃಢವಾಗಿದೆ.
ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿಯೇ ರೋಗಗಳು ಹೆಚ್ಚಾಗಿ ಕಂಡುಬರುತ್ತಿವೆ. ನಿನ್ನೆ ಅರಸೀಕೆರೆ ತಾಲೂಕಿನಲ್ಲಿ ಡೆಂಗೆಯಿಂದ ಮೂರುವರೆ ವರ್ಷದ ಬಾಲಕ ಮೃತನಾಗಿದ್ದು, ಬಾಲಕನ ಸಾವಿನಿಂದ ಗ್ರಾಮಾಂತರ ಭಾಗದಲ್ಲಿ ಆತಂಕ ಹೆಚ್ಚಿದೆ. ಜನರು ಹೆಚ್ಚಿನ ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆ ಕರೆ ನೀಡಿದೆ. ಗ್ರಾಮೀಣ ಭಾಗದಲ್ಲಿ ಅನೈರ್ಮಲ್ಯದಿಂದಲೇ ಡೆಂಘೆ, ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೇಕ ಗ್ರಾಮಗಳಲ್ಲಿ ಅಧಿಕಾರಿಗಳಿಗೆ ಪತ್ರ ಬರೆದರೂ ಸ್ವಚ್ಛತೆ ಬಗ್ಗೆ ಗಮನ ಹರಿಸಿಲ್ಲ ಎನ್ನಲಾಗಿದೆ.
ಡೆಂಗೆ ಹಾಗೂ ಚಿಕುನ್ ಗುನ್ಯಾ ತಡೆಗಟ್ಟಲು ಏನು ಮಾಡಬೇಕು?
- ಸೊಳ್ಳೆಗಳನ್ನು ನಿಯಂತ್ರಿಸಬೇಕು
- ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ
- ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ
- ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ
- ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ
- ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ
- ತೆಂಗಿನ ಚಿಪ್ಪು, ಟಯರ್ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
- ತೊಟ್ಟಿ, ಬಿಂದಿಗೆ, ಡ್ರಮ್ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.
- ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
- ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
- ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.
ಇದನ್ನೂ ಓದಿ: Dengue vaccine | ಶೀಘ್ರವೇ ಡೆಂಗೆ ಲಸಿಕೆ! ಅನುಮತಿ ಕೋರಿದ ಔಷಧ ಕಂಪನಿಗಳು