Site icon Vistara News

Free Health Camp: ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರ: ಸಚಿವ ದಿನೇಶ್ ಗುಂಡೂರಾವ್

Minister Dinesh Gundu Rao in Health camp

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದಲೇ ಉಚಿತ ಆರೋಗ್ಯ ಶಿಬಿರಗಳನ್ನು (Free Health Camp) ರಾಜ್ಯದಾದ್ಯಂತ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಗಾಂಧಿನಗರದಲ್ಲಿ ಆರೋಗ್ಯ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಈ ರೀತಿಯ ಶಿಬಿರಗಳು, ಆರೋಗ್ಯ ಸೇವೆಗಳು ರಾಜ್ಯದ ಹಳ್ಳಿಗಾಡಿನ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯದ ಜಿಲ್ಲೆಗಳು ಹಾಗೂ ತಾಲೂಕು ಮಟ್ಟಕ್ಕೂ ಉಚಿತ ಆರೋಗ್ಯ ಶಿಬಿರಗಳನ್ನು ಕೊಂಡೊಯ್ಯುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.‌

ಮುಂಜಾಗ್ರತೆಯಿಂದ ಕಾಯಿಲೆಗಳನ್ನು ತಡೆಗಟ್ಟುವುದು ಬಹುಮುಖ್ಯ. ಜನರ ಜೀವನ ಶೈಲಿ ಬದಲಾದಂತೆ, ಇವತ್ತಿನ ದಿನಮಾನಗಳಲ್ಲಿ ಬಿ.ಪಿ, ಶೂಗರ್, ಕ್ಯಾನ್ಸರ್, ಕಿಡ್ನಿ ಸಮಸ್ಯೆಯ ಕಾಯಿಲೆಗಳು ಜ‌ನರನ್ನ ಕಾಡುತ್ತಿವೆ. ಈ ಕಾಯಿಲೆಗಳನ್ನ ಮೊದಲೇ ಪತ್ತೆ ಹಚ್ಚಿದರೇ, ಚಿಕಿತ್ಸೆ ಮೂಲಕ ಆರಂಭದಲ್ಲೇ ಗುಣಪಡಿಸಬಹುದು. ಹೀಗಾಗಿ ಉಚಿತ ಆರೋಗ್ಯ ಶಿಬಿರಗಳು ಹೆಚ್ವು ಅವಶ್ಯಕವಾಗಿದ್ದು, ಜನಸಾಮಾನ್ಯರಿಗೆ ಹೆಚ್ವು ಸದುಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ | Gruha Lakshmi Scheme: ಆ.30ಕ್ಕೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಅಂದೇ ಮಹಿಳೆಯರ ಖಾತೆಗೆ 2000 ರೂ.

ಹೃದಯಘಾತ ತಡೆಯಲು ಪುನೀತ್ ಹೆಸರಲ್ಲಿ ಅಪ್ಪು ಯೋಜನೆ

ಹಠಾತ್ ಹೃದಯಘಾತ ತಡೆಯುವ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು. ಹೃದಯಘಾತಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಯೋಜನೆಗೆ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಅಪ್ಪು ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಜಯದೇವ ಆಸ್ಪತ್ರೆಯನ್ನು ಈ ಯೋಜನೆಗೆ ಹಬ್ ಮಾಡಲಾಗಿದೆ. ಕೇವಲ ಆಸ್ಪತ್ರೆ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿಯೂ Automated External Defibrillators (AED )ಅಳವಡಿಕೆ ಮಾಡಲಾಗುತ್ತೆ.‌ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್, ಏರಪೋರ್ಟ್ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ AED ಅಳವಡಿಕೆ ಮಾಡುತ್ತೇವೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ, ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಗೋಲ್ಡನ್ ಟೈಮ್‌ನಲ್ಲಿ ಟ್ರೀಟ್‌ಮೆಂಟ್ ಬಳಿಕ ಆಸ್ಪತ್ರೆಗೆ ಶೀಫ್ಟ್ ಮಾಡಬಹುದು. ರೋಗಿಯನ್ನು ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ ಎಂದು ತಿಳಿಸಿದರು.

ಹೃದಯಘಾತದ ಸಮಯದಲ್ಲಿ ಆಸ್ಪತ್ರೆಗೆ ಶಿಫ್ಟ್ ವೇಳೆಯಲ್ಲಿಯೇ ಸಾಯುತ್ತಾರೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಹೃದಯಾಘಾತ ತಪ್ಪಿಸಲು ಮೆಡಿಸಿನ್‌ ಪೂರೈಸಲಾಗುವುದು. ಹೃದಯಾಘಾತದ ಸೂಚನೆ ಬಂದರೆ ತಕ್ಷಣ ಸಂಬಂಧಿಸಿದ ಔಷಧಿ ನೀಡಿ, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ ರವಾನಿಸಲಾಗುವುದು. ಎರಡು ವಾರಗಳಲ್ಲಿ ಈ ಬಗ್ಗೆ ಟೆಂಡರ್ ಕರೆದು ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಗಾಂಧಿನಗರ ಆರೋಗ್ಯ ಮೇಳ ಮುನ್ನುಡಿಯಾಗಲಿದೆ

ಗಾಂಧಿನಗರ ಆರೋಗ್ಯ ಶಿಬಿರ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಳ್ಳುವ ಉಚಿತ ಆರೋಗ್ಯ ಶಿಬಿರಗಳಿಗೆ ಒಂದು ಮುನ್ನುಡಿಯಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದರು. ಬೃಹತ್ ಗಾಂಧಿನಗರ ಆರೋಗ್ಯ ಶಿಬಿರಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ಸುವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಬಿ.ಪಿ, ಶುಗರ್, ಕಣ್ಣಿನ ತಪಾಸಣೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೂ ಇ.ಸಿ.ಜಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಆರೋಗ್ಯ ಇಲಾಖೆಯ ಎಲ್ಲ ಚಿಕಿತ್ಸೆಗಳು ಶಿಬಿರದ ಮುಖಾಂತರ ಜನರ ಬಳಿಗೆ ಕೊಂಡುಯ್ಯುವ ನಿಟ್ಟಿನಲ್ಲಿ ಗಾಂಧಿನಗರ ಆರೋಗ್ಯ ಶಿಬಿರ ಮುನ್ನುಡಿ ಬರೆದಿದೆ ಎಂದು ಆಯುಕ್ತ ರಂದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ | Power Point with HPK : ಶಾಸಕರಿಗೆ ಹೆಚ್ಚಿನ ಅನುದಾನ ಬೇಕಿದ್ದರೆ ಮುಂದಿನ ಬಜೆಟ್‌ವರೆಗೆ ಕಾಯಬೇಕೆಂದ ಜಾರ್ಜ್!

ಆರೋಗ್ಯ ಶಿಬಿರಕ್ಕೆ ಗಾಂಧಿ ನಗರ ಜನರ ದಂಡು

ಸಾವಿರಾರು ಸಂಖ್ಯೆಯಲ್ಲಿ ಜನರು ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ತಪಾಸಣೆ, ಉಚಿತ ಚಿಕಿತ್ಸೆಯ ಲಾಭ ಪಡೆದರು. ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಹಿಡಿದು, ಸ್ತ್ರೀ ರೋಗ ಸಮಸ್ಯೆ, ಮಕ್ಕಳ ಆರೋಗ್ಯ, ಕೀಲು ಮತ್ತು ಮೂಳೆ ಚಿಕಿತ್ಸೆ, ನರ ಸಮಸ್ಯೆ, ಹೃದಯ ಚಿಕಿತ್ಸೆ, ಚರ್ಮದ ಸಮಸ್ಯೆ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್, ಕಣ್ಣು, ಹಲ್ಲು, ಕಿಡ್ನಿ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಯಿತು.‌ ಅಲ್ಲದೇ ಆಯುಷ್ ಇಲಾಖೆಯ ಆರೋಗ್ಯ‌ ಸೇವೆಗಳು ಸೇರಿದಂತೆ ಮನೋ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಜನರ ಬಳಿಗೆ ತರಲಾಗಿತ್ತು. ಅತ್ಯಾಧುನಿಕ ಆರೋಗ್ಯ ಸೇವೆಗಳ ಕುರಿತಂತೆ ಮಾಹಿತಿ, ಮೊಬೈಲ್ ಹೆಲ್ತ್ ಕೇರ್, ಬಸ್ ಗಳಲ್ಲಿ ಆರೋಗ್ಯ ಸೇವೆಗಳು ಲಭ್ಯವಿದ್ದವು. 16 ಕೌಂಟರ್, 10 ಫಾರ್ಮಸಿ ಸೆಂಟರ್‌ಗಳಲ್ಲಿ 100ಕ್ಕೂ ಹೆಚ್ವು ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು.‌ 3 ಕೋಟಿ ಮೌಲ್ಯದ ಔಷಧಗಳನ್ನು ಜನರಿಗಾಗಿ ಉಚಿತ ಆರೋಗ್ಯ ಶಿಬಿರದಲ್ಲಿ ಕಲ್ಪಿಸಲಾಗಿತ್ತು. ವೈದ್ಯರು ಸೇರಿದಂತೆ ಸರಿಸುಮಾರು 700 ಆರೋಗ್ಯ ಸಿಬ್ಬಂದಿ ಶಿಬಿರದಲ್ಲಿ ಕಾರ್ಯನಿರ್ವಹಿಸಿದರು.

Exit mobile version