Site icon Vistara News

ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿ; 100 ಕೋಟಿ ಒಪ್ಪಂದಕ್ಕೆ ಆರೋಗ್ಯ ಇಲಾಖೆ ಸಹಿ

Hospital Development

ಬೆಂಗಳೂರು: ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಯಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯ ಅಭಿವೃದ್ಧಿ (Hospital Development) ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುಂದಾಗಿದೆ.

ಈಗಾಗಲೇ ಸಿಎಸ್‌ಆರ್ ಬಾಕ್ಸ್ ಮೂಲಕ ರಾಯಚೂರು ಜಿಲ್ಲೆಯಲ್ಲಿನ 10 ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯವನ್ನು 3 ಕೋಟಿ ಸಾಮಾಜಿಕ ಹೊಣೆಗಾರಿಕೆ ನಿಧಿ ಅನುದಾನದಲ್ಲಿ ಉನ್ನತೀಕರಿಸುವ ಕಾರ್ಯ ಚಾಲ್ತಿಯಲ್ಲಿದೆ. ಗುಂಜಹಳ್ಳಿ, ಉಡ್ಮಗಲ, ಗಿಲ್ಲಸುಗೂರು, ಬಳಗನೂರು, ಬಲ್ಲಟಗಿ, ಗಬ್ಬೂರು, ಮಸರ್ಕಲ್, ಕೊಪ್ಪಾರ, ಗಳಗ ರಾಮದುರ್ಗ ಸೇರಿ 10 ಸರ್ಕಾರಿ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.

ಸಿಎಸ್‌ಆರ್ ಬಾಕ್ಸ್ (CSRBOX) ಸಂಸ್ಥೆ ಮೂಲಕ ವಿವಿಧ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿ ರಾಜ್ಯದಲ್ಲಿ ಅವಶ್ಯವಿರುವ 200 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯವನ್ನು ಅಂದಾಜು ರೂ. 100 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸಿಎಸ್‌ಆರ್ ಬಾಕ್ಸ್ (CSRBOX) ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ | ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಿಸಿ; ಸಿಎಂಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ

ಇದಲ್ಲದೆ ಗ್ರಾಮೀಣ ಜನರ ಬಳಿಗೆ ತೆರಳಿ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 2 ಕೋಟಿ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ Volvo ಮತ್ತು Narayana Health ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಿದ್ಧಪಡಿಸಿರುವ “ಸಂಚಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸಮಪರ್ಕವಾಗಿ ಬಳಸಿಕೊಂಡು ರಾಜ್ಯದಲ್ಲಿನ ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯ ಉನ್ನತಿಕರಿಸುವ ಸಲುವಾಗಿ ಖಾಸಗಿ ಕಂಪನಿಗಳ ಜತೆ ಬಾಂಧವ್ಯ ವೃದ್ಧಿಸಲು ಇಲಾಖೆಯಡಿ ಉಪ ನಿರ್ದೇಶಕರನ್ನು ರಾಜ್ಯಮಟ್ಟದ ನೋಡಲ್ ಅಧಿಕಾರಿಯನ್ನಾಗಿ ಮೊದಲ ಬಾರಿಗೆ ನೇಮಿಸಲಾಗಿದೆ.

ಇದನ್ನೂ ಓದಿ | Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಸಮಸ್ಯೆ ಪರಿಹಾರಕ್ಕೆ ಡಿ.27ರಿಂದ ಗ್ರಾಪಂಗಳಲ್ಲಿ ವಿಶೇಷ ಶಿಬಿರ

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇಲಾಖೆಯ ಜತೆ ಖಾಸಗಿ ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕರಿಗೆ ಸ್ಥಳೀಯವಾಗಿ ಗುಣಮಟ್ಟದ, ಸುಸಜ್ಜಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಲಭಿಸಲಿದ್ದು ಇದರಿಂದ ಜನರಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಆರೋಗ್ಯ ಸುಧಾರಣೆಗೆ ಉಪಯುಕ್ತವಾಗಲಿದೆ. ಹೀಗಾಗಿ ಸಿಎಸ್‌ಆರ್‌ ನಿಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

Exit mobile version