Site icon Vistara News

ಸಿದ್ದರಾಮಯ್ಯ ಅದೇನು ಹೇಳುವರೋ ಬಿಚ್ಚಿಡಲಿ, ನಾನೂ ಬಿಚ್ಚಿಡುವೆ: ಸಚಿವ ಡಾ. ಕೆ. ಸುಧಾಕರ್

ಡಾ.ಕೆ.ಸುಧಾಕರ್

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಏನು ಹೇಳಬೇಕೆಂದಿದ್ದಾರೋ ಅದನ್ನು ಬಹಿರಂಗ ಪಡಿಸಲಿ. ಅವರು ಬಿಚ್ಚಿಟ್ಟರೆ ನಾನು ಅವರ ಬಗ್ಗೆ ಎಲ್ಲವನ್ನೂ ಹೇಳುವೆ. ಅವರು ನನ್ನ ಹಳೇ ಗುರುಗಳಾಗಿದ್ದು, ಪ್ರೀತಿ ಜಾಸ್ತಿ ಆಗಿರಬೇಕು. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ರಾಜಕೀಯ ಬೇರೆ, ವೈಯಕ್ತಿಕ ಬೇರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುಧಾಕರ್‌ಗೆ ಬಾಯಿ ಮುಚ್ಚಿಕೊಂಡು ಇರಲು ಹೇಳಿ ಇಲ್ಲವಾದರೆ ಅವನ ಕತೆಯೆಲ್ಲ ಹೇಳಬೇಕಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ನನ್ನ ಬಗ್ಗೆ ಈ ರೀತಿ ಮಾತನಾಡುವವರಲ್ಲ, ಈಗಲೂ ನಮ್ಮ ರಾಜಕೀಯೇತರ ಸಂಬಂಧ ಚೆನ್ನಾಗಿದೆ. ಪಕ್ಕದಲ್ಲಿ ಇರುವವರು ಹೇಳಿಕೊಟ್ಟಿರುತ್ತಾರೆ. ಅದಕ್ಕೆ ಅವರು ಹೀಗೆ ಹೇಳಿರುತ್ತಾರೆ. ಒಂದು ವೇಳೆ ಬಿಚ್ಚಿಡುವುದು ಇದ್ದರೆ ಬಿಚ್ಚಿಡಲಿ, ನಾನು ಬಿಚ್ಚಿಡುತ್ತೇನೆ ಎಂದು ಹೇಳಿದರು.‌

ಇದನ್ನೂ ಓದಿ | ಸ್ಥಳೀಯ ಸಂಸ್ಥೆಗಳ ಚುನಾವಣೆ; ನ್ಯಾ. ಭಕ್ತವತ್ಸಲ ಸಮಿತಿ ಶಿಫಾರಸು ಅನುಮೋದನೆ ಮಾಡಿದ ರಾಜ್ಯ ಸರ್ಕಾರ

ನನಗೆ ಸಿದ್ದರಾಮಯ್ಯ ಅವರ ಮೇಲೆ ಗೌರವವಿದೆ. ಚಿಕ್ಕಬಳ್ಳಾಪುರದಲ್ಲಿ ಒಳ್ಳೆಯ ಅಭ್ಯರ್ಥಿ ಹಾಕಲಿ, ಇವರು ಸಿಎಂ ಆಗಿದ್ದವರೇ ಸೋತಿಲ್ಲವೇ? ಎಂದ ಅವರು, ಸೋಲು-ಗೆಲುವು ಸಾಮಾನ್ಯ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ಆಗುತ್ತಿದೆ. ಬರಲಿ ನಾವು ಒಳ್ಳೆಯ ಅಭ್ಯರ್ಥಿ ಹಾಕುತ್ತೇವೆ. ನಮ್ಮನ್ನು ಅವರು ಸೋಲಿಸಿದರೆ, ನಾವೂ ಅವರನ್ನು ಸೋಲಿಸುತ್ತೇವೆ ಎಂದು ಹೇಳಿದರು.

ಆಗಸ್ಟ್ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ಮಾಡಿ, ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ಹೇಳುತ್ತೇವೆ. ಆದರೆ, ಇದು ಸಿದ್ದರಾಮೋತ್ಸವ ರೀತಿಯಲ್ಲಿ ವ್ಯಕ್ತಿ ಪೂಜೆ ಸಮಾವೇಶವಲ್ಲ. ನಾವು ಮೂರು ವರ್ಷಗಳ ಕಾಲ ಜನಪರ ಕೆಲಸ ಮಾಡಿದ್ದೇವೆ. ಅದರ ವರದಿ ಜನರಿಗೆ ಕೊಡುತ್ತಿದ್ದೇವೆ ಎಂದರು.

ಟಿಕೆಟ್‌ ಕೊಟ್ಟಿದ್ದು ನಾನು ಎಂದು ಹೇಳಿದ್ದ ಸಿದ್ದರಾಮಯ್ಯ

ಸುಧಾಕರ್‌ಗೆ ಬಾಯಿ ಮುಚ್ಚಿಕೊಂಡು ಇರಲು ಹೇಳಿ, ಇಲ್ಲವಾದರೆ ಅವನ ಕತೆಯೆಲ್ಲ ಹೇಳಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ‌ ಎಚ್ಚರಿಕೆ ನೀಡಿದ್ದರು. ಸುಧಾಕರ್‌ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಆಗ ಟಿಕೆಟ್‌ ಕೊಟ್ಟಿದ್ದು ನಾನು, ಅವರಿಗೆ ಬಾಯಿ ಮುಚ್ಚಿಕೊಂಡು ಇರುವುದಕ್ಕೆ ಹೇಳಿ. ಇಲ್ಲವೆಂದರೆ ಅವರು ಟಿಕೆಟ್‌ಗಾಗಿ ಏನೇನು ಮಾಡಿದ್ದಾರೆ ಎಂದ ಹಳೇ ಕತೆಯಲ್ಲ ಹೇಳಬೇಕಾಗುತ್ತದೆ ಎಂದಿದ್ದರು.

ಇದನ್ನೂ ಓದಿ | ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಸರಕಾರದ ಜನೋತ್ಸವ ಆಗಸ್ಟ್‌ 28ಕ್ಕೆ ಮರುನಿಗದಿ

Exit mobile version