ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ- ಹೊರಗುತ್ತಿಗೆ (Health workers Protest) ನೌಕರರ ಬಗೆಗಿನ ವಿಳಂಬ ನೀತಿ ಧೋರಣೆ ಹಾಗೂ ನಿರ್ಲಕ್ಷ್ಯವನ್ನು ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆಗಿಳಿದಿದ್ದಾರೆ. ನೌಕರರ ಸೇವೆ ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಹಾಗೂ ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ಸಂಸ್ಥೆ ಮತ್ತು ನೇರ ವೇತನ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಭರವಸೆ ನೀಡಿ ಸರ್ಕಾರ ಕೈಬಿಟ್ಟಿದೆ. ಈಗ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಸರ್ಕಾರ ಸ್ಪಂದಿಸದೆ ಇದ್ದಲ್ಲಿ ಮುಖ್ಯಮಂತ್ರಿಗಳ ಹಾಗೂ ಆರೋಗ್ಯ ಸಚಿವರ ಮನೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೇಡಿಕೆ ಈಡೇರಿಕೆಗೆ ವಿಳಂಬ ಮಾಡಿದಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷ ವಿಶ್ವರಾಧ್ಯ ಎಚ್. ಯಮೋಜಿ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿರುವ ನೌಕರರು, ಕುಟುಂಬಕ್ಕೆ ಅನುಕುಂಪ ಆಧಾರಿತ (Compensatory Job) ನೌಕರಿ ನೀಡಬೇಕು. ಶೇ.20ಕ್ಕೆ ನಿಗದಿಯಾಗಿದ್ದ ಕೃಪಾಂಕವನ್ನು ಶೇ.30ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಬೇಕು. ಗುತ್ತಿಗೆ ನೌಕರರಿಗೆ ಪ್ರೋತ್ಸಾಹ ಧನವನ್ನು ಮತ್ತು ಹೊರಗುತ್ತಿಗೆ ನೌಕರರಿಗೆ ಬೋನಸ್ ನಿಯಮದಂತೆ ನೀಡುವುದು. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ವಿಮೆ ಸೇರಿ ಇತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಹಾಗೂ ತಕ್ಷಣ ಜಾರಿಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಆರೋಗ್ಯ ಸೇವೆಗಳ ವ್ಯತ್ಯಯಕ್ಕೆ ಸರ್ಕಾರವೇ ಹೊಣೆ
ಸರ್ಕಾರಿ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಹೊರಗುತ್ತಿಗೆ ನೌಕರರೆಲ್ಲರೂ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದರಿಂದ ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು. ಒಂದು ವೇಳೆ ಈ ಸಮಯದಲ್ಲಿ ಸಾರ್ವಜನಿಕರಿಗೆ ಆಗುವ ಆರೋಗ್ಯ ಸೇವೆಗಳ ವ್ಯತ್ಯಯಕ್ಕೆ ನೇರವಾಗಿ ಸರ್ಕಾರ ಮತ್ತು ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಪ್ರತಿಭಟನಾನಿರತ ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ. ಸರ್ಕಾರ ಕೂಡಲೇ ವಿಳಂಬ ಧೋರಣೆ ಬಿಟ್ಟು, ನೌಕರರನ್ನು ಪದೇ ಪದೆ ಬೀದಿಗೆ ಇಳಿಯುವಂತೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಮೀನಮೇಷ
ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುವ ಸರ್ಕಾರಿ ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ದುಡಿದ ಸಂಬಳ ನೀಡಲು ಮತ್ತು ಶ್ರೀನಿವಾಸಾಚಾರಿ ವರದಿ ಅನುಷ್ಠಾನ ಮಾಡಲು ಸರ್ಕಾರವು ಸತಾಯಿಸುತ್ತಿದ್ದು, ಮೀನಮೇಷ ಎಣಿಸುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇದನ್ನೂ ಓದಿ: PM Modi Karnataka Visit Live: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ವರದಿ ಪ್ರಕಾರ 15% ವೇತನ ಹೆಚ್ಚಳ, ವರ್ಗಾವಣೆ, ವಿಮೆ ಯೋಜನೆ, ವೈದ್ಯಕೀಯ ಚಿಕಿತ್ಸೆ ಮರುಪಾವತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಿ ಎಂದು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸರ್ಕಾರ ಮಾತ್ರ 2 ವರ್ಷದಿಂದ ಪರಿಶೀಲನಾ ಹಂತದಲ್ಲಿ ಇದೆ ಎಂದು ಕೈತೊಳೆದುಕೊಂಡಿದೆ.
ಬೆಂಗಳೂರಿನಲ್ಲಿ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ