Site icon Vistara News

Heart Attack: ಬಸ್ಸು ಓಡಿಸುತ್ತಿದ್ದಾಗಲೇ ಹಾರ್ಟ್‌ ಅಟ್ಯಾಕ್‌; ಕೆಎಸ್‌ಆರ್‌ಟಿಸಿ ಚಾಲಕ ಸಾವು

ksrtc Driver die in heart attack

ಚಿಕ್ಕಮಗಳೂರು: ಹೃದಯಾಘಾತದಿಂದ (Heart Attack) ಕರ್ತವ್ಯನಿರತ ಕೆಎಸ್ಆರ್‌ಟಿಸಿ ಬಸ್ ಚಾಲಕ (Ksrtc Bus Driver) ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೆಸಗೊಡ್ ಗ್ರಾಮದ ಬಳಿ ಘಟನೆ ನಡೆದಿದೆ. ಚಾಲಕ ರವಿ ಲಮಾಣಿ (46) ಮೃತ ದುರ್ದೈವಿ.

ಹೃದಯವು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಕರ್ತವ್ಯದಲ್ಲಿರುವಾಗಲೇ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಮೂಡಿಗೆರೆ, ಗುತ್ತಿಹಳ್ಳಿ, ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಈ ಘಟನೆ ನಡೆದಿದೆ. ಬಸ್ ಚಾಲನೆ ಮಾಡುವಾಗ ಚಾಲಕ ರವಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಒಂದು ಕೈಯಲ್ಲಿ ಸ್ಟೇರಿಂಗ್‌ ಹಿಡಿದು ಮತ್ತೊಂದು ಕೈಯಲ್ಲಿ ಎದೆಗೆ ಸವರಿಕೊಂಡು ಕೂಗಳತೆ ದೂರದವರೆಗೆ ಬಸ್‌ ಚಲಾಯಿಸಿದ್ದಾರೆ. ಆದರೆ ನೋವು ಸಹಿಸಲು ಆಗದೇ ಕೂಡಲೇ ರಸ್ತೆ ಮಧ್ಯೆಯೇ ಬ್ರೇಕ್‌ ಹಾಕಿ ಬಸ್ ನಿಲ್ಲಿಸಿದ್ದಾರೆ.

ನೋವಿನಿಂದ ನರಳಾಡುತ್ತಿದ್ದ ರವಿಯನ್ನು ಕೂಡಲೇ ಬಸ್‌ ನಿರ್ವಾಹಕ ಪ್ರಯಾಣಿಕರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯೆಯೇ ರವಿ ಮೃತಪಟ್ಟಿದ್ದಾರೆ. ಚಾಲಕ ರವಿ ಕೊಪ್ಪಳದ ಕೂಕ್ನೂರ್ ಗ್ರಾಮದವರಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.

“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್‌ ದಿಂಡೋರ್‌ ಮಾಹಿತಿ ನೀಡಿದ್ದಾರೆ.

“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್‌ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ

“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version