ಬೆಂಗಳೂರು: ಇಲ್ಲಿನ ಕೆಂಗೇರಿ ಸಂಚಾರಿ ಠಾಣೆಯ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಪ್ರಿಯಾಂಕಾ ಮೃತ ದುರ್ದೈವಿ. ಭಾನುವಾರ ರಾತ್ರಿ 11.30ರ ಸುಮಾರಿಗೆ ಹೃದಯಾಘಾತದಿಂದ ಪ್ರಿಯಾಂಕಾ ಮೃತಪಟ್ಟಿದ್ದಾರೆ.
ಪ್ರಿಯಾಂಕಾ 2018ರಲ್ಲಿ ಮದುವೆಯಾಗಿದ್ದರು. ಆದರೆ 2021ರ ಕೊರೊನಾ ಸಮಯದಲ್ಲಿ ಪ್ರಿಯಾಂಕಾ ಪತಿ ಮೃತಪಟ್ಟಿದ್ದರು. ಪತಿ ಸಾವಿನ ವೇಳೆ ಪ್ರಿಯಾಂಕಾ ಒಂದು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ವಿಧಿಯಾಟಕ್ಕೆ ಪ್ರಿಯಾಂಕ ಹೃದಯಾಘಾತದಿಂದ ಮೃತಪಟ್ಟಿದ್ದು, ಆಕೆಯ ಮಗು ಅನಾಥವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯೋಧನ ಉಸಿರು ನಿಲ್ಲಿಸಿದ ಹೃದಯ
ಬಾಗಲಕೋಟೆಯ ಗುಳೇದಗುಡ್ಡ ತಾಲೂಕಿನ ಅಲ್ಲೂರ ಎಸ್.ಪಿ ಗ್ರಾಮದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯಲ್ಲನಗೌಡ ಪಾಟೀಲ (42) ಮೃತ ಯೋಧ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲನಗೌಡ ಪಾಟೀಲ, ಜೂ.16ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹೃದಯಾಘಾತ ಸಂಭವಿಸಿದೆ. ನಿನ್ನೆ ಭಾನುವಾರ ಮೃತ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ರವಾನಿಸಲಾಗಿತ್ತು.
ಯೋಧ ಯಲ್ಲನಗೌಡ ಪಾಟೀಲ, ಪತ್ನಿ ಭಾರತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರನ ಅಗಲಿದ್ದಾರೆ. ಇನ್ನೆರಡು ತಿಂಗಳಲ್ಲಿ ನಿವೃತ್ತಿ ಆಗುತ್ತಿದ್ದ ಯೋಧ, ಗ್ರಾಮದಲ್ಲಿಯೇ ಇರುವುದಾಗಿ ಹೇಳಿದ್ದರು ಎನ್ನಲಾಗಿದೆ. ಅಲ್ಲೂರ ಎಸ್.ಪಿ. ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ನಡೆಸಲಾಗಿದೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮೃತ ಯೋಧನ ಅಂತಿಮ ದರ್ಶನ ಪಡೆದುಕೊಂಡರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ