| ಪಾಂಡುರಂಗ ಜಂತ್ಲಿ, ವಿಜಯನಗರ
ಇದು ಹಳ್ಳಿಯ ವಿದ್ಯಾರ್ಥಿನಿಯೊಬ್ಬಳು ದಿಲ್ಲಿವರೆಗೆ ಹೋಗಿ ಬಂದ ಯಶಸ್ಸಿನ ಕತೆ. ಛಲವಿದ್ದರೆ, ಹುಮ್ಮಸ್ಸು ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಈಕೆ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ರಾಜ್ಯದ ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಎನ್.ಸಿ.ಸಿ ಜೂನಿಯರ್ ಅಂಡರ್ ಆಫಿಸರ್ ಆಗಿರುವ ಸಾಯಿ ತೇಜಸ್ವಿನಿ, ಆಗಸ್ಟ್ 15ರಂದು ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿದ್ದು ಹೇಗೆ? ಅಲ್ಲಿ ಆಯ್ಕೆಯಾಗಲು ಏನೆಲ್ಲ ತಯಾರಿ ಬೇಕು ಎಂಬುದು ಸೇರಿ ಹಲವು ವಿಷಯಗಳ ಬಗ್ಗೆ ತೇಜಸ್ವಿನಿಯು ವಿಸ್ತಾರ ನ್ಯೂಸ್ ಜತೆ ಅನುಭವ ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ತೊಟ್ಟಿಲನ್ನು ತುಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬುದನ್ನು ವಿದ್ಯಾರ್ಥಿನಿ ಸಾಯಿ ತೇಜಶ್ವಿನಿ ಸಾಧಿಸಿ ತೋರಿಸಿದ್ದಾಳೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಎನ್.ಸಿ.ಸಿ ಜೂನಿಯರ್ ಅಂಡರ್ ಆಫಿಸರ್ ಆಗಿದ್ದಾಳೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಿಂದ ಸ್ವಾತಂತ್ರ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿ ಜಿಲ್ಲೆಗೆ ವಾಪಸ್ ಆಗಿದ್ದಾಳೆ. ಫಾರೆಸ್ಟ್ ಅಧಿಕಾರಿ ಆಗುವ ಕನಸು ಹೊತ್ತಿರೋ ತೇಜಸ್ವಿನಿ ಪರೇಡ್‌ನಲ್ಲಿ ಪಡೆದ ಅನುಭವವನ್ನು ಹಂಚಿಕೊಂಡಿದ್ದಾಳೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪ್ರತಿಷ್ಠತಿ ವಿಜಯನಗರ ಕಾಲೇಜಿನಲ್ಲಿ BSc ಎರಡನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ಸಾಯಿ ತೇಜ್ವಿಸಿನಿ, ಬಡ ಕುಟುಂಬದಲ್ಲಿ ಹುಟ್ಟಿದವಳು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿರುವ ಇವರು, ವಿಜಯನಗರ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯಿಂದ ಕರ್ನಾಟಕ-ಗೋವಾದ 34 ಬೆಟಾಲಿಯನ್ ಪ್ರತಿನಿಧಿಯಾಗಿ ಪರೇಡ್‌ನಲ್ಲಿ ಭಾಗವಹಿಸಿ ಜಿಲ್ಲೆಯ ಜನರ ಮನ ಗೆದ್ದಿದ್ದಾಳೆ.
ಪರೇಡ್ ಬಳಿಕ ಮೋದಿ ಜತೆ ಭೇಟಿಯಿಂದ ಸಂತಸ!
ಸ್ವಾತಂತ್ರ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿದ್ದೇ ನನ್ನ ಸೌಭಾಗ್ಯ. ಪರೇಡ್ ಮುಗೀದ ಬಳಿಕ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು ನನಗೆ ತುಂಬಾ ಸಂತೋಷ ಆಗಿದೆ. ವಿಜಯನಗರದಿಂದ ದೆಹಲಿಗೆ ಹೋಗಿದ್ದು ಬದುಕು ಸಾರ್ಥಕ ಆಯಿತು. ಜೊತೆಗೆ ವಿಜಯನಗರ ಜಿಲ್ಲೆಯ ಎನ್.ಸಿ.ಸಿ ಪ್ರತಿನಿಧಿಯಾಗಿ ದೆಹಲಿಗೆ ಹೋಗಿದ್ದು ಬಹಳ ಖುಷಿ ಆಗಿದೆ ಎಂದು ಸಾಯಿ ತೇಜಸ್ವಿನಿ ಹೇಳಿದ್ದಾಳೆ.
ಎನ್.ಸಿ.ಸಿಯಲ್ಲಿ ಸಿಗುವ ಟ್ರೈನಿಂಗ್ ನಮಗೆ ಬುನಾದಿ
ಬೆಟಾಲಿಯನ್‌ನಲ್ಲಿ ಮಾಡುವ ಪ್ರ್ಯಾಕ್ಟೀಸ್‌ಗಿಂತ ಎನ್.ಸಿ.ಸಿಯಲ್ಲಿ ಸಿಗುವ ಪ್ರ್ಯಾಕ್ಟೀಸೇ ನಮಗೆ ಬುನಾದಿ ಆಗಿರುತ್ತದೆ. ವಿಜಯನಗರ ಕಾಲೇಜಿನ ಎನ್.ಸಿ.ಸಿ ಕಮಾಂಡರ್ ಪ್ರಭುಸ್ವಾಮಿ ತುಂಬ ಕಠಿಣ ಹಾಗೂ ಒಳ್ಳೆಯ ತರಬೇತಿ ನೀಡಿದ್ದಾರೆ. ಎನ್.ಸಿ.ಸಿ ತರಬೇತಿಯಲ್ಲಿ ಕಲಿತಿದ್ದೇ ಕ್ಯಾಂಪ್ ಸೆಲೆಕ್ಷನ್ ತುಂಬ ಸಹಕಾರಿ ಆಗಿದೆ ಅಂತಿದ್ದಾರೆ ಜೂನಿಯರ್ ಅಂಡರ್ ಆಫೀಸರ್ ತೇಜಸ್ವಿನಿ. ಜೊತೆಗೆ ಎನ್.ಸಿ.ಸಿಯಲ್ಲಿ ಕಮಾಂಡರ್ ಹ್ಯಾವೀ ವರ್ಕ್ ಮಾಡಿಸಿದ್ದೇ ನಾನು ಸ್ವಾತಂತ್ರ್ಯೋತ್ಸವ ಪರೇಡ್‌ನಲ್ಲಿ ಭಾಗಿ ಆಗಲು ಸಾಧ್ಯ ಆಗಿದ್ದು ಎಂದು ತೇಜಸ್ವಿನಿ ಹೇಳುತ್ತಾಳೆ.
ಬಳ್ಳಾರಿ ಎನ್.ಸಿ.ಸಿ ಬೆಟಾಲಿಯನ್ ಸಹಾಯ
ವಿಜಯನಗರ ಹಾಗೂ ಬಳ್ಳಾರಿಯಿಂದ ಪರೇಡ್‌ಗೆ ಏಕೈಕಳಾಗಿ ಜೂನಿಯರ್ ಅಂಡರ್ ಆಫಿಸರ್ ಆಗಿ ಆಯ್ಕೆ ಆದೆ. ನನ್ನ ಜಿಲ್ಲೆಯಿಂದ ಮೊದಲು ಬೆಂಗಳೂರಿಗೆ ಹೋದೆ. ಅಲ್ಲಿ ಫ್ರೀ ಐಡಿಸಿ ಕ್ಯಾಂಪ್‌ನಲ್ಲೂ ನಾನು ಸಲೆಕ್ಟ್ ಆದೆ. ಅಲ್ಲಿ ನನಗೆ ಶಿಸ್ತಿನ ಜೊತೆಗೆ ಕಲ್ಚರಲ್ ಬಗ್ಗೆ ತುಂಬ ಚೆನ್ನಾಗಿ ಕಲಿಸಿ ಕೊಟ್ಟಿದ್ದಾರೆ. ನನ್ನ ಜಿಲ್ಲೆಯಿಂದ ನಾನೊಬ್ಬಳೇ ಸ್ವಾತಂತ್ರ್ಯೋತ್ಸ ಪರೇಡಿಗೆ ಆಯ್ಕೆ ಆಗಿದ್ದೇನೆ. ಹೀಗಾಗಿ ಬೆಂಗಳೂರಿನಲ್ಲಿ ಫ್ರೀ ಐಡಿಸಿ ವೇಳೆ ಏನು ಕಲಿಸಿಕೊಟ್ಟರೋ ಅದೇ ರೀತಿ ದೆಹಲಿಯಲ್ಲೂ ನಡೆದುಕೊಂಡಿದ್ದೇನೆ.
ದೆಹಲಿಯಲ್ಲಿ 15 ದಿನ ಕಠಿಣ ತರಬೇತಿ
ಬೆಂಗಳೂರಿನಿಂದ ದೆಹಲಿಗೆ ಹೋಗಲು ಮೂರು ದಿನ ಕಾಲಾವಕಾಶ ಬೇಕಾಯಿತು. ಜುಲೈ 31ಕ್ಕೆ ದೆಹಲಿಯಲ್ಲಿ ರಿಪೋರ್ಟ್ ಆಗಬೇಕಿತ್ತು. ಅದೇ ಪ್ರಕಾರ ರಿಪೋರ್ಟ್ ಆದೆ. ಅಂದಿನಿಂದ ಆಗಸ್ಟ್ 14ರವರೆಗೆ ನಮಗೆ ಕಠಿಣವಾದ ರಿಹರ್ಸಲ್, ಪ್ರ್ಯಾಕ್ಟೀಸ್ ನಡೆಯಿತು. ಕೆಂಪು ಕೋಟೆಗೆ ಬೆಳಗ್ಗೆ 3 ಗಂಟೆಗೆ ಹೋಗುತ್ತಿದ್ದೆವು. 11 ಗಂಟೆವರೆಗೆ ಪರೇಡಿಗೆ ಬೇಕಾದ ಸಿದ್ದತೆಗಳನ್ನು ವಿವಿಧ ವಿಭಾಗಗಳ ಕಡಾಂಡರ್ಗಳು ತರಬೇತಿ ನೀಡುತ್ತಿದ್ದರು.
40 ಡಿಗ್ರಿ ಸೆಲ್ಸಿಯಸ್ ಬಿಸಿಲು ತಂದ ಸುಸ್ತು
ದೆಹಲಿಯಲ್ಲಿ ಪ್ರತಿದಿನ ಸುಮಾರು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಬಿಸಿಲು ದಾಖಲಾಗುತ್ತಿತ್ತು. ಆ ಬೆಂಕಿಯಂತಹ ಬಿಸಿಲಿನಲ್ಲಿ ತರಬೇತಿ ಪಡೆಯೋದು ತುಂಬ ಕಠಿಣ ಎನಿಸುತ್ತಿತ್ತು. ಆದರೂ ಗಟ್ಟಿ ದೈರ್ಯ ಮಾಡಿ ಪರಿಸ್ಥಿತಿ ಎದುರಿದ್ದೇನೆ.
ಮೋದಿ ನನಗೆ ಹ್ಯಾಂಡ್ ಶೇಕ್ ಮಾಡಿದ್ದೇ ಸಂತೋಷ..!
ಪ್ರಧಾನಿ ಮೋದಿ ನಮ್ಮ ಎದುರಿಗೆ ಬಂದಾದ ತುಂಬ ಸಂತೋಷ ಆಯಿತು. ನಮ್ಮ ಹತ್ತಿರ ಬಂದಾಗ ನಮಸ್ಕಾರ ಅಂತ ಹೇಳಿ, ಹ್ಯಾಂಡ್ ಶೇಕ್ ಮಾಡಿದ್ದೆವು. ನಮ್ಮ ಜೊತೆಗೆ ಟೈಮ್ ಕಳೆಯಲು ಅವರು ಇನ್ನೊಂದು ಪ್ರಮುಖ ಕಾರ್ಯಕ್ರಮ ಮಿಸ್ ಮಾಡಿಕೊಂಡರು. ಈ ಸಂತೋಷದ ಕ್ಷಣಗಳು ಜೀವನಪೂರ್ತಿ ಇರುತ್ತವೆ.
ನಮ್ಮ ಶಿಸ್ತು ನಮಗೆ ಗೆಲುವು, ಯಶಸ್ಸು ತರುತ್ತದೆ
ಯಾವುದೇ ಕೆಲಸ ತಪ್ಪಾಗಿರಲಿ ಸರಿಯಾಗಿರಲಿ. ಅದನ್ನು ಶಿಸ್ತಿನಿಂದ ಮಾಡಬೇಕು. ಅಂದಾಗ ಮಾತ್ರ ನಮಗೆ ಗೆಲುವು ಸಿಗುವುದಕ್ಕೆ ಸಾಧ್ಯ. ಗೆಲುವು ಸಾಧಸಲು ಒಂದು ದಾರಿ ಇರಬೇಕು. ಅದಕ್ಕೆ ಒಂದು ಗುರಿ ಇರಬೇಕು. ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಢಿಸಿಕೊಳ್ಳಬೇಕು ಅಂತ ಸಾಯಿ ತೇಜಶ್ವಿನಿ ಇತರೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಎಲ್ಲರಿಗೂ ಒಂದು ಅವಕಾಶ ಅಂತ ದೇವರು ಕೊಟ್ಟಿರುತ್ತಾನೆ. ಮಾಡಿದ ಕೆಲಸಕ್ಕೆ ಪ್ರತಿಫಲ ಇದ್ದೇ ಇರುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದು ನನಗೆ ಆಗಿರುವ ಅನುಭವ. ಜೊತೆಗೆ ನಾನು ಎನ್.ಸಿ.ಸಿಯಲ್ಲಿದ್ದಾಗ ಅವಕಾಶಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ನನಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಆ ಒಂದು ಅವಕಾಶ ಸೃಷ್ಟಿಸಿಕೊಟ್ಟಿದ್ದಕ್ಕೆ ದೇವರಿಗೂ ಕೃತಜ್ಞಳಾಗಿದ್ದೇನೆ.
ಅವಳ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ : ತೇಜಸ್ವಿನಿ ತಾಯಿ ಸುನಿತಾ
ನನ್ನ ಮಗಳು ಯಾವುದೇ ಕಲಸ ಮಾಡಿದರು ತುಂಬಾ ಪರಿಶ್ರಮದಿಂದ ಮಾಡುತ್ತಾಳೆ. ಅವಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನ ನೋಡುವುದೇ ಖುಷಿ. ಅಂತಹದರಲ್ಲಿ ಅವರ ಜೊತೆಗೆ ಹ್ಯಾಂಡ್ ಶೇಕ್ ಮಾಡಿದ್ದು ನಮಗೆ ಸಂತೋಷ ಆಗುತ್ತಿದೆ ಎಂದು ಸಾಯಿ ತೇಜಸ್ವಿನಿ ತಾಯಿ ಸುನಿತಾ ಮನ ಬಿಚ್ಚಿ ಮಾತಾಡಿದರು.
ನನ್ನ ಕಾಲೇಜಿನ ಗುರುಗಳೇ ನನಗೆ ಬೆನ್ನೆಲುಬು..!
ಸ್ವಾತಂತ್ರ್ಯೋತ್ಸವ ಪರೇಡಿಗೆ ಆಯ್ಕೆ ಆದಾಗಿನಿಂದ ನನ್ನ ಕಾಲೇಜಿನ ಪ್ರಿನ್ಸಿಪಾಲ್, ಅಧ್ಯಕ್ಷರು ಹಾಗೂ ಎನ್.ಸಿ.ಸಿ ಕಮಾಂಡರ್ ತುಂಬಾ ಸಹಾಯ ಮಾಡಿದ್ದಾರೆ. ವಿಜಯನಗರದಿಂದ ಹೊರಡೋ ದಿನದಿಂದ ವಾಪಸ್ ಊರಿಗೆ ಬರುವವರೆಗೆ ನನ್ನ ಸಂಪರ್ಕದಲ್ಲಿದ್ದು ಸಹಾಯ ಮಾಡಿದ್ದಾರೆ. ಅವರಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಸಾಯಿ ಹೇಳಿದರು.
ವಿಜಯನಗರ ಕಾಲೇಜು ಪ್ರಿನ್ಸಿಪಾಲ್ ಸಂತಸ
ಸಾಯಿ ತೇಜ್ವಸಿನಿ ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ಸಾಧನೆ ಮಾಡಿದ್ದಾಳೆ. ತೇಜಸ್ವಿನಿಗೆ ಓದಲು ವಿಜಯನಗರ ಕಾಲೇಜು ವತಿಯಿಂದ ಎಲ್ಲ ರೀತಿಯ ಸಹಕಾರ ಮಾಡುತ್ತೇನೆ ಎಂದು ಅಧ್ಯಕ್ಷರಾದ ಅಸುಂಡಿ ಬಿ. ನಾಗರಾಜಗೌಡ ಶುಭಕೋರಿದರು. ಈ ವಿದ್ಯಾರ್ಥಿಯ ಸಾಧನೆ ಬೇರೆ ವಿದ್ಯಾರ್ಥಿಗಳಿಗೆ ಮಾದರಿ ಆಗಲಿ ಅಂತ ಪ್ರಿನ್ಸಿಪಾಲ್ ಶುಭಕೋರಿದರು. ಕಾಲೇಜಿನ ಎನ್.ಸಿ.ಸಿ ವಿಭಾಗದ ಕಮಾಂಡರ್ ಪ್ರಭುಸ್ವಾಮಿ ಕೂಡಾ ತೇಜಸ್ವಿನಿ ಭವಿಷ್ಯ ಉಜ್ವಲ ಆಗಿರಲಿ ಅಂತ ಹಾರೈಸಿದರು.
ಇದನ್ನೂ ಓದಿ| Independence Day | ಕಾರವಾರದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಧ್ವಜಾರೋಹಣ