ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆ ಗರಿಷ್ಠ ಮಟ್ಟಕ್ಕೆ (Heatwaves In Bengaluru) ತಲುಪುತ್ತಿದ್ದು, ಜನಸಾಮಾನ್ಯರು ಮನೆಯಿಂದ ಹೊರಬರಲು ಮೀನಮೇಷ ಎಣಿಸುತ್ತಿದ್ದಾರೆ. ಆದರೆ, ಕೆಲಸಗಳ ನಿಮಿತ್ತ ಇಲ್ಲವೇ ಅನಿವಾರ್ಯ ಕಾರಣಗಳಿಂದ ಹೊರಗೆ ಬರುವಂತಾಗಿದೆ.
ಈ ನಡುವೆ ಬೆಂಗಳೂರಿನ ಸೌಂದರ್ಯ ಹಾಗೂ ಶುಚಿತ್ವ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರು (Pourakarmikas) ಸಹ ಇದಕ್ಕೆ ಹೊರತಾಗಿಲ್ಲ. ಬೆಂಕಿ ಕೆಂಡದಂತಿರುವ ಬಿಸಿಲಿನಲ್ಲಿ ಕೆಲಸ ನಿರ್ವಹಿಸಿಸುವವರಿಗೆ ಅರ್ಧ ದಿನ ರಜೆ ನೀಡಿ ಪೌರಕಾರ್ಮಿಕರ ಹಿತ ಕಾಪಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ದಿನವಿಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಬೇಸಿಗೆಯ ಬೇಗೆ ತಟ್ಟುತ್ತಿದೆ. ಬೆಳಗ್ಗೆ 9-10 ಗಂಟೆಯಿಂದಲೇ ವಾತಾವರಣದಲ್ಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕೆಲಸ ಮಾಡುವುದೇ ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆ ನಿತ್ಯ ಅರ್ಧ ದಿನ ರಜೆ ನೀಡಬೇಕೆಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಆಗ್ರಹ ಮಾಡಿದೆ.
ರಾಜ್ಯದಲ್ಲಿ ಬಿಸಿಗಾಳಿ ವಾತಾವರಣವಿರುವ ಕಾರಣ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಪ್ರತಿನಿತ್ಯ ಅರ್ಧ ದಿನ ರಜೆಯನ್ನು ತಕ್ಷಣದಿಂದಲೇ ಘೋಷಿಸಬೇಕು ಎಂದು ಎಐಸಿಸಿಟಿಯು ಒತ್ತಾಯಿಸಿದೆ. ಈ ಕುರಿತು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದು, ಪೌರಕಾರ್ಮಿಕರಿಗೆ ಆಗಾಗ ಕೆಲಸದಿಂದ ವಿರಾಮವನ್ನು ನೀಡಬೇಕು ಎಂದು ಒತ್ತಾಯಿಸಿದೆ.
ಕುಡಿಯುವ ನೀರನ್ನು ಒದಗಿಸುವುದು, ಒಆರ್‌ಎಸ್, ಮಜ್ಜಿಗೆಯನ್ನು ಪ್ರತಿನಿತ್ಯ ನೀಡಬೇಕು. ಹಾಗೆಯೇ ರಾಜ್ಯ ವಿಪತ್ತು ನಿರ್ವಹಣೆ ಸಂಸ್ಥೆಯು ಪ್ರಕಟಿಸಿದ ರಾಜ್ಯ ಬಿಸಿಗಾಳಿ ಕ್ರಿಯಾ ಯೋಜನೆ-2022 ಅನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಎಐಸಿಸಿಟಿಯು ಆಗ್ರಹಿಸಿದೆ.
ಇದನ್ನೂ ಓದಿ: Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ!
ಸದ್ಯ ಬಿಸಿಲ ಬೇಗೆ ಹೇಗಿದೆ ಎಂದರೆ ಕೂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ, ಪರಿಸ್ಥಿತಿಯನ್ನು ಹೇಳಿಕೊಳ್ಳೋಕೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಅವಲೋಕನ ಮಾಡಿ ಪೌರಕಾರ್ಮಿಕರ ಹಿತ ಕಾಯುವ ಕೆಲಸಕ್ಕೆ ಮುಂದಾಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.