ಕೊಪ್ಪಳ: ವಾಯುಭಾರ ಕುಸಿತದಿಂದ ಕೊಪ್ಪಳದಲ್ಲಿ ಕಳದೆ ಎರಡು ಮೂರು ದಿನಗಳಿಂದ ಭಾರಿ ಮಳೆ ಆಗುತ್ತಿದೆ.ಈ ಭಾರಿ ಮಳೆಯಿಂದಾಗಿ ಹಲವಾರು ಬೆಳೆಗಳು ನಾಶವಾಗಿವೆ. ಮಳೆಯಿಂದ ಆದ ಬೆಳೆ ನಾಶದಿಂದ ಕೃಷಿಕರು ಕಣ್ಣಿರು ಸುರಿಸುವಂತೆ ಆಗಿದೆ. ಈ ಹಾನಿಯ ಕುರಿತು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಏಪ್ರಿಲ್‌ನಲ್ಲಿ ಸುರಿದ ಗಾಳಿ ಮಳೆಗೆ ಕೊಪ್ಪಳ ಜಿಲ್ಲೆಯಲ್ಲಿ ಬರೋಬ್ಬರಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿದೆ ಎಂದು ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಅಂದಾಜಿಸಿದೆ. ಮಳೆ ಗಾಳಿಯಿಂದ ಕಟಾವು ಹಂತದಲ್ಲಿರುವ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ 5,599 ಹೆಕ್ಟರ್ ಪ್ರದೇಶ ಹಾನಿಗೊಳಗಾಗಿದೆ. ಇದರ ಜತೆಗೆ 22.4 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, 11.74 ಹೆಕ್ಟೇರ್ ನುಗ್ಗೆ, 20.39 ಹೆಕ್ಟೇರ್ ವೀಳ್ಯೆದೆಲೆ ಹಾಗೂ 5.4 ಹೆಕ್ಟೇರ್ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯು ಹಾನಿಗೊಳಗಾಗಿದೆ ಎಂದು ಸಮೀಕ್ಷೆಯಿಂದ ಅಂದಾಜಿಸಲಾಗಿದೆ.
ಈ ಕುರಿತಂತೆ ಮತ್ತಷ್ಟು ಮಾಹಿತಿ ನೀಡಿರುವ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು, ಜಿಲ್ಲೆಯಲ್ಲಿ 5,599.90 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾಗೂ 76.82 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಯಮದ ಪ್ರಕಾರ 33% ಬೆಳೆ ನಾಶವಾಗಿದ್ದರೆ ಮಾತ್ರ ಅವರಿಗೆ ಪರಿಹಾರ ನೀಡಲಾಗುವುದು.
ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಯಮದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 742 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ನೀಡಬೇಕು. ಏಪ್ರಿಲ್ ಅಂತ್ಯದವರೆಗಿನ ಬೆಳೆಹಾನಿ ಕುರಿತು ಸಮೀಕ್ಷೆ ನಡೆಸಲಾಗಿದ್ದು ತಂತ್ರಾಂಶದಲ್ಲಿ ಎಂಟ್ರಿ ಮಾಡಿ ಅವರಿಗೆ ಪರಿಹಾರ ನೀಡಬಹುದಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮಳೆಯಿಂದ ನೆಲಕ್ಕುರುಳಿದ ಬೆಳೆ; ನೀರು ತುಂಬಿದ ಗುಂಡಿಗೆ ಬಿದ್ದು ಬಾಲಕಿ ಸಾವು –