ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ (ಮಾರ್ಚ್17) ಮತ್ತೆ ಜೋರು ಮಳೆ (Bangalore Rain) ಸುರಿಯಿತು. ಗುರುವಾರ ರಾತ್ರಿಯಿಡೀ ನಗರದ ಹಲವಾರು ಪ್ರದೇಶಗಳಲ್ಲಿ ಮಳೆ ಸುರಿದಿತ್ತು. ಅಂತೆಯೇ ಶುಕ್ರವಾರ ಸಂಜೆಯೇ ವೇಳೆಗೆ ಮತ್ತೆ ಧಾರಾಕಾರ ಮಳೆ ಸುರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ಮಳೆಯ ನಿರೀಕ್ಷೆಯೇ ಇಲ್ಲದೆ ಹೊರಗೆ ಹೊರಟಿದ್ದ ಮಂದಿ ತಾಪತ್ರಯ ಎದುರಿಸಿದರು. ಪ್ರಮುಖವಾಗಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಫ್ಲೈಓವರ್ಗಳ ಅಡಿ ಸೇರಿದಂತೆ ಕಂಡಕಂಡಲ್ಲಿ ವಾಹನ ನಿಲ್ಲಿಸಿ ಆಶ್ರಯ ಪಡೆದರು ಇದರ ಪರಿಣಾಮವಾಗಿ ನಗರದ ಕೆಲವು ಕಡೆ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು.
ಬೆಂಗಳೂರಿನ ಕೋರಮಂಗಲ ಹೆಚ್ ಎಸ್ ಆರ್, ಮಾರತ್ ಹಳ್ಳಿ ಭಾಗದಲ್ಲಿ ಸಂಜೆಯ ವೇಳೆ ಮಳೆಯಾದ ಕಾರಣ ಐಟಿ ಕಂಪನಿಗಳಿಗೆ ಸೇರಿದಂತೆ ಕಚೇರಿ ಕೆಲಸಕ್ಕೆ ಹೋಗಿದ್ದ ಜನ ಮನೆಗೆ ವಾಪಸಾಗುವಾಗ ತೊಂದರೆ ಅನುಭವಿಸಿದರು. ಬಹುತೇಕ ಮಂದಿ ಛತ್ರಿ ಹಾಗೂ ರೇನ್ಕೋಟ್ ಇಲ್ಲದೇ ತೆರಳಿದ್ದ ಕಾರಣ ಮಳೆಯಿಂದ ತೊಯ್ದು ತೊಪ್ಪೆಯಾದರು.
ನಗರದ ಕೆ ಆರ್ ಮಾರ್ಕೆಟ್, ಮೆಜೆಸ್ಟಿಕ್, ಲಾಲ್ ಬಾಗ್, ವಿಲ್ಸನ್ ಗಾರ್ಡನ್, ಕಾರ್ಪೊರೇಷನ್, ಜೇಸಿ ರೋಡ್ ಸುತ್ತ ಬಿರುಗಾಳಿಯೊಂದಿಗೆ ಮಳೆ ಬಂತು. ಹೀಗಾಗಿ ದೈನಂದಿನ ಕಾರ್ಯ ಹಾಗೂ ಖರೀದಿಗಾಗಿ ಈ ಪ್ರದೇಶಕ್ಕೆ ಬಂದಿದ್ದ ಮಂದಿ ಮಳೆಯಲ್ಲೇ ನೆನೆದುಕೊಂಡು ಹೋಗುವಂತಾಯಿತು.
ಇದನ್ನೂ ಓದಿ : Karnataka Rain: ರಾಜ್ಯಾದ್ಯಂತ ಇನ್ನೆರಡು ದಿನ ವರುಣಾರ್ಭಟ; ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ
ಶುಕ್ರವಾರ ವಾರಾಂತ್ಯದ ಖುಷಿಯದಲ್ಲಿದ್ದ ಜನರಿಗೆ ಮಳೆ ಸ್ವಲ್ಪ ಮಟ್ಟಿಗೆ ಅಡಚಣೆ ಮಾಡಿತು. ಊರುಗಳಿಗೆ ತೆರಳಿದ್ದ ಜನರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದರು. ಬಿಎಂಟಿಸಿ ಸೇರಿದಂತೆ ನಾನಾ ಊರುಗಳಿಗೆ ಹೊರಟಿದ್ದ ಬಸ್ಗಳು ಕೂಡ ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದವು. ಟಿಕೆಟ್ ಬುಕ್ ಮಾಡಿಕೊಂಡು ಹೊರಟಿದ್ದ ಪ್ರಯಾಣಿಕರು ಕೂಡ ಸಂಕಷ್ಟಕ್ಕೆ ಬಿದ್ದರು.
ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನಗಳು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.