ಬೆಂಗಳೂರು: ಕಳೆದ 8-10 ದಿನಗಳಿಂದಲೂ ರಾಜಧಾನಿಯಲ್ಲಿ ಸಂಜೆ ಹೊತ್ತಿಗೆ ಮಳೆ ಬೀಳುತ್ತಿದ್ದು, ಇಂದು ಮಧ್ಯಾಹ್ನವೇ ವರುಣನ ಸಿಂಚನವಾಗಿದೆ. ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಅಸಾನಿ ಚಂಡಮಾರುತ ಇಂದು ಒಡಿಶಾ-ಆಂಧ್ರಪ್ರದೇಶ ಕರಾವಳಿ ತೀರದತ್ತ ಚಲಿಸುತ್ತಿದ್ದು, ಅದರ ಪರಿಣಾಮವೇ ಬೆಂಗಳೂರಿನಲ್ಲೂ ಮಳೆಯಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ನಾಳೆಯೂ ಇದೇ ಹವಾಮಾನ (Weather In Bangalore) ಮುಂದುವರಿಯಲಿದೆ. ಹಾಗೇ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದ್ದು, ಗಾಳಿಯ ತೀವ್ರತೆಯೂ ಹೆಚ್ಚಿರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ಡೆಂಘೆ, ಮಲೇರಿಯಾ ಹೆಚ್ಚಳ: ಪಾರಾಗಲು ಇಲ್ಲಿದೆ ಉಪಾಯ
ಅಸಾನಿ ಚಂಡಮಾರುತದಿಂದಾಗಿಯೇ ಇಂದು ಮುಂಜಾನೆಯಿಂದಲೇ ಮೋಡವಿತ್ತು. ಇಂದು ಸಂಜೆ-ರಾತ್ರಿಯ ಹೊತ್ತಿಗೂ ಕೂಡ ಗುಡುಗು-ಮಿಂಚು ಸಹಿತ ಮಳೆಯಾಗಬಹುದು. ದಕ್ಷಿಣ ಒಳನಾಡಿನಲ್ಲಿ ಶಿವಮೊಗ್ಗ-ಚಿಕ್ಕಮಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳ ಮೂರ್ನಾಲ್ಕು ಕಡೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದೂ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದರ ಹೊರತಾಗಿ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪಬಹುದು. ತುಂತುರು ಅಥವಾ ಸಾಧಾರಣ ಪ್ರಮಾಣದ ಮಳೆಯಾಗಬಹುದು ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ | Cyclone Asani | ಆಂಧ್ರಪ್ರದೇಶ, ಒಡಿಶಾದತ್ತ ಚಂಡಮಾರುತ; ಮಳೆ-ಪ್ರವಾಹ ಎಚ್ಚರಿಕೆ ನೀಡಿದ IMD