ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದ (Heavy Rain) ಹಲವು ಕಡೆ ಸೇತುವೆಗಳು ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇಲ್ಲಿನ ಮಧುಗಿರಿ ತಾಲ್ಲೂಕಿನ ಚಂದ್ರಗಿರಿಯಿಂದ ಗುಟ್ಟೆಗೆ ಮಾರ್ಗ ಕಲ್ಪಿಸುವ ಸೇತುವೆ ಜಲಾವೃತಗೊಂಡಿದ್ದು, ರಭಸವಾಗಿ ಹರಿಯುತ್ತಿರುವ ನೀರಲ್ಲಿ ಟ್ರ್ಯಾಕ್ಟರ್ ಚಲಾಯಿಸಲು ಚಾಲಕ ಮುಂದಾಗಿದ್ದು, ಈ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಚಾಲಕ ಶಿವಣ್ಣ ಗುಟ್ಟೆ ಟ್ರ್ಯಾಕ್ಟರ್‌ನಲ್ಲಿ ಹಾಲಿನ ಕ್ಯಾನ್ ತುಂಬಿಸಿಕೊಂಡು ಸೇತುವೆ ದಾಟಲು ಹೋಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಜತೆಗೆ ಟ್ರ್ಯಾಕ್ಟರ್‌ನೊಳಗೆ ಇದ್ದ ನಾಲ್ಕು ಜನ ಮಹಿಳೆಯರು ಹಾಗೂ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕನ ಹುಚ್ಚಾಟದಿಂದ ಈ ಅವಘಡ ಸಂಭವಿಸಿದೆಯಾದರೂ ಅದೃಷ್ಟದಿಂದಾಗಿ ಅನಾಹುತ ತಪ್ಪಿದ್ದು, ಸ್ಥಳೀಯರು ಸೇರಿ ದೋಣಿ ಸಹಾಯದಿಂದ ಎಲ್ಲರನ್ನೂ ಪಾರು ಮಾಡಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತುಮಕೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಸಿಪಿಐ ಹನುಮಂತರಾಯಪ್ಪ ಭೇಟಿ ನೀಡಿದ್ದಾರೆ.
ಜೆಸಿಬಿ ಚಾಲಕನ ದುಸ್ಸಾಹಸ
ಧಾರಕಾರವಾಗಿ ಹರಿಯುತ್ತಿರುವ ಮಳೆ ನೀರಲ್ಲಿ ವಾಹನ ಸವಾರರ ಹುಚ್ಚಾಟ ಮುಂದುವರಿದಿದೆ. ರಭಸವಾಗಿ ಹರಿಯುತ್ತಿರುವ ನೀರಲ್ಲಿ ಕೊಚ್ಚಿ ಹೋಗುತ್ತೇವೆ ಎಂದು ತಿಳಿದಿದ್ದರೂ ಹರಿಯುವ ನೀರಲ್ಲಿ ಜೆಸಿಬಿ ಚಾಲಕ ದುಸ್ಸಾಹಸ ಮೆರೆದಿದ್ದಾನೆ. ಜಿಲ್ಲೆಯ ತಿಪಟೂರು ತಾಲೂಕಿನ ಮಲ್ಲೆನಹಳ್ಳಿಯಲ್ಲಿ ಹೊಸೂರಿನಿಂದ ಮಲ್ಲೆನಹಳ್ಳಿಗೆ ಸಂಪರ್ಕಿಸುವ ಸೇತುವೆ ಬಳಿ ಜೆಸಿಬಿ ಚಾಲಕ ವಾಹನ ಚಲಾಯಿಸಿದ್ದಾನೆ.
ಮನೆಗೆ ಜಲ ದಿಗ್ಭಂಧನ
ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಕೆರೆ ಕೋಡಿ ಒಡೆದು ಹೋಗಿದ್ದು, ಮಾಚಘಟ್ಟ ಗ್ರಾಮ ಜಲಾವೃತಗೊಂಡಿದೆ. ಗ್ರಾಮದಿಂದ ಬೇರೆಡೆಗೆ ಹೋಗಲು ಗ್ರಾಮಸ್ಥರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಇತ್ತ ಗುಬ್ಬಿ ತಾಲೂಕಿನ ಕಡಬ ಹೋಬಳಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಗೆ ಎರಡು ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ. ರಾಯರಪಾಳ್ಯ ಗ್ರಾಮದ ನಿವಾಸಿಗಳಾದ ವೀರಭದ್ರಯ್ಯ ಮತ್ತು ಗವಿರಂಗಮ್ಮ ಅವರಿಗೆ ಸೇರಿದ ಮನೆಗಳು ಸಂಪೂರ್ಣ ಜಲಾವೃತ ಆಗಿದೆ. ಮಳೆಗೆ ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದರೆ ಮಳೆ ನೀರಿಗೆ ದಿನಸಿ ಪದಾರ್ಥಗಳು ಕೊಚ್ಚಿ ಹೋಗಿವೆ.
ಇದನ್ನೂ ಓದಿ | ಕೋಲಾರ, ರಾಮನಗರದಲ್ಲಿ ಭಾರಿ ಮಳೆಯಿಂದ ಫಾರ್ಮ್‌ನೊಳಗೆ ನುಗ್ಗಿದ ನೀರು: ಸಾವಿರಾರು ಕೋಳಿಗಳ ಸಾವು