ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ಮಳೆಯ ಅಬ್ಬರ ಆರಂಭವಾಗಿದೆ. ಶುಕ್ರವಾರ ರಾತ್ರಿಯೂ ನಗರದಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಜತೆಗೆ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತವಾಗಿದೆ. ಆರ್.ಆರ್.ನಗರ, ಜ್ಞಾನ ಭಾರತಿ, ಏರ್‌ಪೋರ್ಟ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಕೆಲವೆಡೆ ಮರದ ಕೊಂಬೆಗಳು ರಸ್ತೆಗೆ ಉರುಳಿ ಬಿದ್ದವು (Heavy Rain).
ರಸ್ತೆಯಲ್ಲಿ ಸಿಲುಕಿದ ವಾಹನಗಳು
ಬೆಂಗಳೂರಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ಮೈಸೂರು ರಸ್ತೆಯಲ್ಲಿ ವಾಹನ ಸವಾರರು ಸಿಲುಕಿ ಹಾಕಿಕೊಂಡಿದ್ದರು. ಆರ್.ಆರ್. ನಗರ ಆರ್ಚ್ ಬಳಿ ರಸ್ತೆಯಲ್ಲಿ ನೀರು ಉಕ್ಕಿ ಹರಿದು 25ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡು ಸವಾರರು ಪರದಾಡಿದರು. ರಸ್ತೆಯಲ್ಲಿ ಸುಮಾರು ಮೂರು ಅಡಿಯಷ್ಟು ನೀರು ನಿಂತುಕೊಂಡಿತ್ತು.
ಇನ್ನು ನಾಗರಭಾವಿ ಎನ್‌ಜಿಎಫ್ ಬಡಾವಣೆಯ 9ನೇ ಕ್ರಾಸ್‌ನಲ್ಲಿ ಬೆಸ್ಕಾಂ ಲೈಟ್ ಕಂಬ ಹಾಗೂ ಬೃಹತ್ ಮರವೊಂದು ಶೆಡ್ ಮನೆಯ ಮುಂದೆ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಚಾಮರಾಜಪೇಟೆಯಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಬಿನ್ನಿ ಮಿಲ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಿಂದ ಹರಿಯುವ ನೀರು ಗೋಡೆಯಿಂದ ಸೋರಿ ರಾಯಪುರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಕೆಂಗೇರಿ – 89 ಮಿ.ಮೀ.
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62ಮಿ.ಮೀ.
ನಾಯಂಡನಹಳ್ಳಿ – 61.5 ಮಿ.ಮೀ.
ಹೆಮ್ಮಿಗೆಪುರ – 61 ಮಿ.ಮೀ.
ಆರ್ ಆರ್ ನಗರ – 60 ಮಿ.ಮೀ.
ಮಾರುತಿ ಮಂದಿರ – 51.50 ಮಿ.ಮೀ.
ವಿದ್ಯಾಪೀಠ – 50 ಮಿ.ಮೀ.
ಉತ್ತರಹಳ್ಳಿ – 42 ಮಿ.ಮೀ.
ಹಂಪಿನಗರ – 39 ಮಿ.ಮೀ.
ಯಲಹಂಕ – 38.50 ಮಿ.ಮೀ.
ಜಕ್ಕೂರು – 38 ಮಿ.ಮೀ.
ಕೊಟ್ಟಿಗೆಪಾಳ್ಯ – 33 ಮಿ.ಮೀ.
ಕೊಡಿಗೆಹಳ್ಳಿ – 28.50 ಮಿ.ಮೀ.
ನಂದಿನಿ ಲೇಔಟ್ – 28 ಮಿ.ಮೀ.
ಇನ್ನೂ ಮೂರ್ನಾಲ್ಕು ದಿನಗಳ ಕಾಲ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ 40-50 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ, ಕೋಲಾರದಲ್ಲೂ ಮಳೆಯು ಅಬ್ಬರಿಸಲಿದೆ. ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾದರೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾದರೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.
ಇದನ್ನೂ ಓದಿ: Terminal 2: ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಸೋರಿಕೆ; ವಿಮಾನ ಹಾರಾಟ ಅಸ್ತವ್ಯಸ್ತ