ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆ ಮುಂದುವರಿದಿದೆ. ಜೋಡು ಪಾಲದ ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂ ಕುಸಿತ ಸಂಭವಿಸಿದೆ.
ಇದರ ಪರಿಣಾಮ ರಸ್ತೆಯಲ್ಲಿ ಒಂದು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ತಡರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆಯಿತು.
ಬ್ರಹ್ಮಗಿರಿ ತಪ್ಪಲಲ್ಲಿ ಭಾರಿ ಮಳೆಯಾಗುತ್ತಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಸಂಪೂರ್ಣ ಬಂದ್ ಆಗಿದೆ. ರಸ್ತೆಯ ಮೇಲೆ 2 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಬೋಟ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ.
ಮತ್ತೆ ಕಂಪಿಸಿದ ಭೂಮಿ
ಕೊಡಗಿನಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಚೆಂಬು,ಸಂಪಾಜೆಯಲ್ಲಿ ಮುಂಜಾನೆ ೬.೨೩ಕ್ಕೆ ಭೂಮಿ ಕಂಪಿಸಿದ ಅನುಭವವಾಯಿತು. ತಡ ರಾತ್ರಿಯೂ ಭಾರಿ ಶಬ್ದ ಕೇಳಿ ಜನ ಮನೆಯಿಂದ ಹೊರಬಂದರು. ಚೆಂಬು, ಪೆರಾಜೆ, ಸಂಪಾಜೆಯಲ್ಲಿ ಇಲ್ಲಿಯವರೆಗೆ ಒಟ್ಟು ಎಂಟು ಭಾರಿ ಕಂಪನದ ಅನುಭವವಾಗಿದೆ. ಕರಾವಳಿಯಲ್ಲೂ ವರುಣನ ಅಬ್ಬರ ಮುಂದುವರಿದಿದೆ.
5-6 ದಿನ ವರುಣನ ಅಬ್ಬರ
ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹ, ಭೂಕುಸಿತ ಸಂಭವಿಸಿದೆ. ಇನ್ನೂ ೫-೬ ದಿನಗಳ ಕಾಲ ವರುಣನ ಅಬ್ಬರ ನಿರೀಕ್ಷಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಕೆಆರ್‌ಎಸ್ ಅಣೆಕಟ್ಟೆ ಭರ್ತಿಗೆ ಇನ್ನು ಕೇವಲ ಮೂರು ಅಡಿ ಮಾತ್ರ ಬಾಕಿ ಇದೆ.