Site icon Vistara News

Heavy Rain | ರಭಸವಾಗಿ ಹರಿಯುತ್ತಿರುವ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋದ ಹಸು!

rain

ರಾಮನಗರ: ವರುಣನ ಆರ್ಭಟಕ್ಕೆ ರಾಮನಗರ ಜನತೆ ನಲುಗಿ ಹೋಗಿದ್ದು, ಇಲ್ಲಿನ ಕನಕಪುರ ರಸ್ತೆಯಲ್ಲಿನ ಗೌಡಯನದೊಡ್ಡಿ ಬಳಿ ಹಸುವೊಂದು ಕೊಚ್ಚಿ ಹೋಗಿದೆ. ಅರ್ಕಾವತಿ ನದಿಯಲ್ಲಿ ಹಸು ಕೊಚ್ಚಿ ಹೋಗುತ್ತಿರುವ ವಿಡಿಯೊ ವೈರಲ್‌ (Heavy Rain) ಆಗಿದೆ.

ನದಿ ಪಕ್ಕದ ಆಸುಪಾಸಿನಲ್ಲಿ ಮೇವಿಗೆ ಹೋಗಿದ್ದ ವೇಳೆ ಹಸು ನೀರಿಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ರಭಸವಾಗಿ ಹರಿಯುತ್ತಿರುವ ನೀರಿನಿಂದ ದಡಕ್ಕೆ ಬರಲು ಆಗದೇ ಹಸು ತೇಲಿ ಹೋಗಿದೆ. ಹಸು ಯಾರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ.

ನೀರು ಪಾಲಾದ ಹೋಟೆಲ್‌ನ ಪಾತ್ರೆ ಸಾಮಗ್ರಿ

ರಾಮನಗರ ಟೌನ್ ಕನಕಪುರ ಸರ್ಕಲ್ ಬಳಿ ರಂಗಯ್ಯನದೊಡ್ಡಿ ಕೆರೆ ಕೋಡಿ ಒಡೆದ ಪರಿಣಾಮ ಹೋಟೆಲ್ ಹಾಗೂ ಹಲವು ಮನೆಗಳಿಗೆ ನೀರು ನುಗ್ಗಿದೆ. ಇತ್ತ ಹೋಟೆಲ್‌ನಲ್ಲಿದ್ದ ಪಾತ್ರೆ ಸಾಮಗ್ರಿಯೆಲ್ಲವೂ ನೀರು ಪಾಲಾಗಿದ್ದು, ತೇಲಿ ಹೋಗುತ್ತಿದ್ದ ಅಡುಗೆ ಪಾತ್ರೆಯನ್ನು ಸಿಬ್ಬಂದಿ ವಾಪಸ್‌ ತರುತ್ತಿದ್ದ ದೃಶ್ಯ ಕಂಡು ಬಂತು.

ಕಂಟ್ರೋಲ್‌ ರೂಂ ತೆರೆದ ಜಿಲ್ಲಾಡಳಿತ

ರಾಮನಗರದಲ್ಲಿ ಭಾರಿ ಪ್ರಮಾಣದಲ್ಲಿ ಅತಿವೃಷ್ಟಿ ಸೃಷ್ಟಿಯಾಗಿದ್ದು, ಜಿಲ್ಲಾಡಳಿತದಿಂದ ದೂರು ಸ್ವೀಕರಿಸಲು ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. 080-2727 5913, 9113077476 ಸಂಖ್ಯೆಗೆ ಜನರು ಕರೆ ಮಾಡಬಹುದಾಗಿದೆ. ಯಾವುದೇ ಪ್ರಾಣಹಾನಿ, ಅಪಾಯಗಳು, ಅನಾಹುತ ಸಂಭವಿಸಿದರೆ ಕೂಡಲೇ ಮಾಹಿತಿ ನೀಡಲು ಜಿಲ್ಲಾಡಳಿತ ಮನವಿ ಮಾಡಿದೆ.

ಶಾಲಾ-ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಅತಿಯಾದ ಮಳೆಯಿಂದಾಗಿ ಎರಡೂ ತಾಲೂಕಿನಲ್ಲಿ ಪ್ರವಾಹದ ಭೀತಿ ಇದ್ದು, ಮಕ್ಕಳ ಸುರಕ್ಷಿತ ದೃಷ್ಟಿಯಿಂದ ರಾಮನಗರ ಡಿಸಿ ಡಾ. ಅವಿನಾಶ್ ರಾಜೇಂದ್ರ ಮೆನನ್ ರಜೆ ಘೋಷಿಸಿದ್ದಾರೆ.

ಇದನ್ನೂ ಓದಿ | Rain News | ಮಳೆ ಅವಾಂತರದ ಮಾಹಿತಿ ಪಡೆದ ಸಿಎಂ, ರಾಮನಗರಕ್ಕೆ ಹೆಲಿಕಾಪ್ಟರ್‌ ಮೂಲಕ ಹೋಗಲು ನಿರ್ಧಾರ

Exit mobile version