ರಾಯಚೂರು: ಇಲ್ಲಿನ ಮಾನ್ವಿ ತಾಲೂಕಿನಲ್ಲಿ ವ್ಯಾಪಕ ಮಳೆಯಿಂದ (Heavy Rain) ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತನೊಬ್ಬ ಕೊಚ್ಚಿ ಹೋದ ದುರ್ಘಟನೆ ಬುಧವಾರ ನಡೆದಿದೆ. ಜಮೀನು ಕೆಲಸ ಮುಗಿಸಿ ಸಂಜೆ ಮನೆಗೆ ಮರಳುವಾಗ ವೆಂಕಟೇಶ (36) ಎಂಬುವವರು ಕೊಚ್ಚಿ ಹೋಗಿದ್ದಾರೆ.
ಕುರ್ಡಿ ಗ್ರಾಮದ ಹೊರವಲಯದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿತ್ತು. ಆದರೆ, ಇದನ್ನು ಲೆಕ್ಕಸದೇ ವೆಂಕಟೇಶ ದಾಟಲು ಹೋಗಿದ್ದಾರೆನ್ನಲಾಗಿದೆ. ಆಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ವಿಷಯ ತಿಳಿದ ಕೂಡಲೇ ಮಾನ್ವಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಆದರೆ, ಇನ್ನೂ ವೆಂಕಟೇಶ ಪತ್ತೆಯಾಗದ ಹಿನ್ನೆಲೆಯಲ್ಲಿ ಗುರುವಾರವೂ ಶೋಧ ಕಾರ್ಯ ಮುಂದುವರಿದಿದೆ.
ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಶಾಲಾ ವಾಹನ ಚಲಾಯಿಸಿ ಉದ್ದಟತನ
ಲಿಂಗಸುಗೂರು ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಳ್ಳಗಳು ತುಂಬಿ ರಭಸವಾಗಿ ಹರಿಯುತ್ತಿವೆ. ಆದರೆ ತುಂಬಿ ಹರಿಯುತ್ತಿರುವ ಹಳ್ಳದಲ್ಲಿಯೇ ವಿದ್ಯಾರ್ಥಿಗಳು ತುಂಬಿದ ವಾಹನವನ್ನು ಚಲಾಯಿಸಿ ಚಾಲಕನೊಬ್ಬ ಉದ್ದಟತನ ಮೆರೆದಿದ್ದಾನೆ. ಇದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಲಿಂಗಸುಗೂರು ಮತ್ತು ಚಿತ್ತಾಪುರ ರಸ್ತೆಯ ಬೆಂಡೋಣಿ ಹಳ್ಳವು ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಸಂಜೀವ್ ಪಬ್ಲಿಕ್ ಶಾಲೆಯ ವಾಹನವನ್ನು ಲಿಂಗಸುಗೂರಿನಿಂದ ಸುಮಾರು 30 ರಿಂದ 35 ಜನ ವಿದ್ಯಾರ್ಥಿಗಳನ್ನು ಕುರಿಸಿಕೊಂಡು ಬಂದ ಚಾಲಕ ತುಂಬಿ ಹರಿಯುತ್ತಿರುವ ಹಳ್ಳದಲ್ಲಿಯೇ ಬಸ್ ಚಲಾಯಿಸಿದ್ದಾನೆ. ಮಳೆಯಿಂದಾಗಿ ರಸ್ತೆ ಮೇಲೆ ಸುಮಾರು 2-3 ಅಡಿ ನೀರು ನಿಂತಿದ್ದನ್ನು ಲೆಕ್ಕಿಸದೆ, ಚಾಲನೆಗೆ ಮುಂದಾಗಿದ್ದಕ್ಕೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ | Heavy Rain | ಮಳೆಯಿಂದ ಮುಂದುವರಿದ ಸಾವು-ನೋವು; ಪ್ರತ್ಯೇಕ ಕಡೆ ನಾಲ್ವರ ಸಾವು