ಕಾರವಾರ/ಮಂಗಳೂರು: ಭಾರಿ ಮಳೆಯಿಂದಾಗಿ (Heavy Rain ) ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಾಲಾ ಕಟ್ಟಡವೊಂದರ ಚಾವಣಿ ಕುಸಿದಿದೆ. ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಮುಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಗೋಡೆ ಕುಸಿಯಿತು. ಇದರ ಪರಿಣಾಮವಾಗಿ ಚಾವಣಿ ಸಂಪೂರ್ಣ ನೆಲಸಮವಾಯಿತು.
ತಡರಾತ್ರಿ ಶಾಲೆಯ ಕೊಠಡಿ ಕುಸಿದಿದ್ದರಿಂದ ಅದೃಷ್ಟವಶಾತ್ ವಿದ್ಯಾರ್ಥಿಗಳು ಅಪಾಯದಿಂದ ಪಾರಾದರು. ಮಣ್ಣಿನ ಗೋಡೆಯ ಶಾಲೆಯಾಗಿದ್ದರಿಂದ ಮಳೆಯ ಅಬ್ಬರಕ್ಕೆ ಕುಸಿದಿದೆ ಎನ್ನಲಾಗಿದೆ. ಮತ್ತೊಂದು ಕೊಠಡಿಯ ಗೋಡೆಯೂ ಕುಸಿಯುವ ಆತಂಕ ಇದೆ. ಹೀಗಾಗಿ ತರಗತಿ ನಡೆಸುವ ಮುನ್ನ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಸರಗೋಡಿನ ಮಂಜೇಶ್ವರದ ಪಂಚಾಯತ್ ಕಟ್ಟಡ ನೆಲಸಮ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯತ್ತಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಮಂಜೇಶ್ವರ ತಾಲೂಕಿನಲ್ಲಿ ಭಾರಿ ಮಳೆಗೆ ಪಂಚಾಯತ್ ಕಟ್ಟಡವೇ ನೆಲಸಮವಾಗಿದೆ. ಮಂಜೇಶ್ವರದ ವರ್ಕಾಡಿ ಸುಂಕದಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ವರ್ಕಾಡಿ ಪಂಚಾಯತ್ ಹಾಗೂ ಬಿಜೆಪಿ ಕಚೇರಿಯನ್ನು ಹೊಂದಿದ್ದ ಕಟ್ಟಡ ಮಳೆಯ ಕಾರಣದಿಂದ ಧರಾಶಾಹಿಯಾಗಿದೆ. ಭಾನುವಾರ ಆಗಿದ್ದರಿಂದ ಯಾರು ಇಲ್ಲದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ.
ಆಗಸ್ಟ್ 11ರವರೆಗೆ ಆರೆಂಜ್ ಅಲರ್ಟ್ ಘೋಷಣೆ
ರಾಜ್ಯದ ಕರಾವಳಿಯಲ್ಲಿ ಆಗಸ್ಟ್ 11ರ ವರೆಗೆ ಗಾಳಿ ಸಹಿತ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕಡಲತೀರ ಪ್ರದೇಶಗಳ ನಿವಾಸಿಗಳು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಅಲ್ಲದೇ ತಗ್ಗು ಪ್ರದೇಶಗಳು, ಅಪಾಯಕಾರಿ ಸ್ಥಳಗಳಲ್ಲಿರುವಂತಹ ನಿವಾಸಿಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಮೀನುಗಾರರು ಆಳಸಮುದ್ರ ಮೀನುಗಾರಿಕೆ ತೆರಳದಂತೆ ಮೀನುಗಾರಿಕಾ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ಕಡಲತೀರಗಳಿಗೆ ತೆರಳುವ ಪ್ರವಾಸಿಗರ ಸುರಕ್ಷತೆಯ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಸಹಾಯವಾಣಿ
ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಕೇಂದ್ರವನ್ನ ಜಿಲ್ಲಾಡಳಿತ ತೆರೆದಿದ್ದು 24×7 ಕಂಟ್ರೋಲ್ ರೂಂ 1077 ಅಥವಾ 08382- 229857 ಹಾಗೂ ವಾಟ್ಸಪ್ ಸಂಖ್ಯೆ- 9483511015 ಗೆ ಸಂದೇಶ ಕಳುಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಇದನ್ನೂ ಓದಿ | Rain News | ಕೊಡಗಿನಲ್ಲಿ ಮಳೆಯ ಅಬ್ಬರ : ಹಲವೆಡೆ ಭೂಕುಸಿತ, ಸರ್ಕಾರದ ವಿರುದ್ಧ ಆಕ್ರೋಶ