Site icon Vistara News

ತಗ್ಗಿದ ಮಳೆ ಆರ್ಭಟ: ಜಿಟಿಜಿಟಿ ಮಳೆಯ ನಡುವೆಯೇ ರಥೋತ್ಸವ

male Arbhata

ಬೆಂಗಳೂರು : ರಾಜ್ಯದೆಲ್ಲೆಡೆ ಮಳೆಯಿಂದಾಗಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಮಳೆ ಬಂದು ರೈತರು ಸಂತಸ ವ್ಯಕ್ತಪಡಿಸಿದರೆ, ಅದೇ ಮಳೆಯಿಂದಾಗಿ ನಗರದ ಜನರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿಯೂ ಕೊಪ್ಪಳ ತಾಲೂಕಿನ ಮೈನಳ್ಳಿಯಲ್ಲಿ ಶ್ರೀಬುಡ್ಡಮ್ಮದೇವಿ ಜಾತ್ರೆಯಲ್ಲಿ ಮಳೆಯಲ್ಲಿಯೇ ರಥೋತ್ಸವ ಜರುಗಿದೆ. ಮಂಗಳವಾರದಿಂದಲೇ ಕೊಪ್ಪಳದಲ್ಲಿ ನಿರಂತರ ಮಳೆಯಾಗುತ್ತಿದ್ದು, ರಸ್ತೆಗಳು ಹಳ್ಳದಂತಾಗಿತ್ತು. ಆದರೂ ಮಳೆಯ ನೀರಿನಲ್ಲಿಯೇ ರಥ ಎಳೆದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಜನರನ್ನು ಕಂಗೆಡಿಸಿದ್ದ ವರುಣ ಗುರುವಾರ ರಾತ್ರಿಯಿಂದ ಬಿಡುವು ನೀಡಿದ್ದಾನೆ. ಬೇಸಿಗೆ ಹಂಗಾಮಿನಲ್ಲಿ ಹಿಂದೆಂದೂ ಕಾಣದಷ್ಟು ರಣಭೀಕರ ಮಳೆ ಕಳೆದೆರಡು ದಿನ ಸುರಿದಿದೆ. ಶುಕ್ರವಾರ ಬೆಳಗ್ಗೆಯಿಂದ ಮೋಡ ಸರಿದು, ಸೂರ್ಯನ ಬಿಸಿಲು ಬಂದಿದೆ. ಸದ್ಯ ಮಳೆ ನಿಂತಿರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ. ನದಿ, ತೊರೆ, ಶಾಲೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಕೊಂಚ ಮಟ್ಟಿಗೆ ತಗ್ಗಿದೆ.

ಉಕ್ಕಿ ಹರಿದು, ಅನಾಹುತ ಸೃಷ್ಟಿಸಿದ್ದ ಶ್ರೀರಂಗಪಟ್ಟಣದ ಚಿಕ್ಕದೇವರಾಜ ನಾಲೆ ಮತ್ತು ಮದ್ದೂರಿನ ಶಿಂಷಾ ನದಿಯಲ್ಲಿ ಪ್ರವಾಹ ಇಳಿದಿದೆ. ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಗ್ಗು ಪ್ರದೇಶದಲ್ಲಿರುವ ಮನೆಗಳು ಜಲಾವೃತಗೊಂಡ ಪರಿಣಾಮ ನಿವಾಸಿಗಳು ಇನ್ನೂ ಪರಿತಪಿಸುತ್ತಿದ್ದಾರೆ. ಸಂತ್ರಸ್ತರೆಲ್ಲರೂ ಸರ್ಕಾರದಿಂದ ಪರಿಹಾರ ಎದುರು ನೋಡುತ್ತಿದ್ದಾರೆ. ಚುನಾವಣಾ ವರ್ಷ ಆಗಿರುವ ಕಾರಣಕ್ಕೆ ರಾಜಕಾರಣಿಗಳು ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕಳಕಳಿ ತೋರಿದ್ದಾರೆ.

ಇಂಡುವಾಳು ಗ್ರಾಮದ ಬಳಿ ಮಳೆ ನೀರಿನಲ್ಲಿ ಕುಸಿದ ಮತ್ತು ಕೊಚ್ಚಿ ಹೋಗಿದ್ದ ಬೆಂಗಳೂರು-ಮೈಸೂರು ಹೆದ್ದಾರಿ ದುರಸ್ತಿಗೆ ಗುತ್ತಿಗೆ ಸಂಸ್ಥೆ ಡಿಬಿಎಲ್ ಮುಂದಾಗಿದೆ. ಒಡೆದ ನಾಲೆ, ಕೆರೆ ಏರಿಗಳನ್ನು  ವಿಪತ್ತು ನಿರ್ವಹಣಾ ನಿಧಿಯಡಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಇದನ್ನೂ ಓದಿ | ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅಪಘಾತ: ಉರುಳಿ ಬಿದ್ದ ಕಂಟೈನರ್‌

ದಾಖಲೆ ಮಳೆ

ಬೇಸಿಗೆಯಲ್ಲಿ ಈ ಬಾರಿ ಸುರಿದಿರುವುದು ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ಮಂಡ್ಯ ಜಿಲ್ಲೆ ಮೇಯಲ್ಲಿ  ವಾಡಿಕೆಗಿಂತ 335% ಅಧಿಕ ಮಳೆ ಕಂಡಿದೆ. ಮೇ ತಿಂಗಳ ವಾಡಿಕೆ 59 ಮಿ.ಮೀ. ಆಗಿದ್ದರೆ, ವಾಸ್ತವ ಮಳೆ 259 ಮಿ.ಮೀ. ಇನ್ನು, ಕಳೆದ ಐದು ದಿನದಲ್ಲಿ 156 ಮಿ.ಮೀ. ಮಳೆ ಆಗಿದೆ.

ಶ್ರೀರಂಗಪಟ್ಟಣ ಮತ್ತು ಮಂಡ್ಯ ತಾಲೂಕುಗಳಲ್ಲಿ ಕಳೆದ 24 ತಾಸುಗಳಲ್ಲೇ ತಲಾ 71 ಮಿ.ಮೀ. ಮಳೆ ಅಗಿದ್ದು, ಉಳಿದೆಡೆಗಿಂತ ಉಭಯ ತಾಲೂಕುಗಳೇ ಹೆಚ್ಚು ವರುಣಾಘಾತ ಅನುಭವಿಸಿವೆ. ಒಟ್ಟಾರೆ, ಬೇಸಿಗೆ ಮುಗಿಯುವ ಮುನ್ನವೇ ಅಬ್ಬರಿಸಿ ಬೊಬ್ಬಿರಿದಿರುವ ಮಳೆರಾಯ ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಸಂತ್ರಸ್ತರು ವೈಜ್ಞಾನಿಕ ಪರಿಹಾರ ಎದುರು ನೋಡುತ್ತಿದ್ದಾರೆ.

30ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಸತತ ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ. ಕೆ.ಆರ್.ಪೇಟೆ ತಾಲೂಕಿನ ಐಚನಹಳ್ಳಿ, ಬೆಟ್ಟದಹೊಸೂರು, ಬೂಕನಕೆರೆ, ಆಲಂಬಾಡಿಕಾವಲು, ಸೋಮನಹಳ್ಳಿ, ಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಹಾನಿಗೊಳಗಾದ ಮನೆಗಳನ್ನು  ಕೆ.ಆರ್.ಪೇಟೆ ತಹಸಿಲ್ದಾರ್ ರೂಪ ಪರಿಶೀಲಿಸಿದ್ದಾರೆ. ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಡಿಸಿ ಭೇಟಿ

ಮಂಡ್ಯ ನಗರದಲ್ಲಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ ಮತ್ತು ಹಾಲಹಳ್ಳಿ ಸ್ಲಂ ಪ್ರದೇಶಕ್ಕೆ ಜಿಲ್ಲಾಧಿಕಾರಿ ಅಶ್ವಥಿ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.ಬಾಧಿತ ಪ್ರದೇಶಗಳಲ್ಲಿ ಇಂತಹ ಅನಾಹುತ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ನಗರಸಭೆ, ಮುಡಾ, ಲೋಕೋಪಯೋಗಿ ಮತ್ತು ನೀರಾವರಿ ಅಧಿಕಾರಿಗಳಿಗೆ ಅಶ್ವಥಿ ತಾಕೀತು ಮಾಡಿದರು.

ಕೆಆರ್‌ಎಸ್ ಇಂದಿನ ನೀರಿನ ಮಟ್ಟ :

ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು.

ಜಲಾಶಯದ ಇಂದಿನ ನೀರಿನ ಮಟ್ಟ 102.80 ಅಡಿಗಳು.

ಇಂದಿನ ಒಳಹರಿವಿನ ಪ್ರಮಾಣ 16,814 ಕ್ಯೂಸೆಕ್.

ಇಂದಿನ ಹೊರ ಹರಿವಿನ ಪ್ರಮಾಣ 6,343 ಕ್ಯೂಸೆಕ್.

ಜಲಾಶಯದ ಗರಿಷ್ಠ  ನೀರಿನ ಸಂಗ್ರಹ – 49.452 ಟಿಎಂಸಿ.

ಇಂದಿನ ಸಂಗ್ರಹ  25.085 ಟಿಎಂಸಿ.

ವಿಜಯಪುರದಲ್ಲಿ ಕೃಷ್ಣಾ ನದಿಯಲ್ಲಿ ಹೆಚ್ಚಾದ ಒಳಹರಿವಿನಿಂದಾಗಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಏರಿಕೆ ಆಗಿದೆ. ಬೇಸಿಗೆಯಲ್ಲಿ ಕಡಿಮೆಯಾಗಿದ್ದ ಹಿನ್ನೀರು, ನಿರಂತರ ಮಳೆ ಸುರಿಯುತ್ತಿರುವುದರಿಂದ ಹಿನ್ನೆಲೆ ನೀರು ಹೆಚ್ಚಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೋಲ್ಹಾರ ಸೇತುವೆ, ಆಲಮಟ್ಟಿ ಜಲಾಶಯದ ಗೇಟ್ ಕ್ಲೋಸ್ ಮಾಡಿರುವಾಗ ಕೋಲ್ಹಾರ ಸೇತುವೆ ಬಳಿ ಹಿನ್ನೀರು ನಿಲ್ಲುತ್ತದೆ. ಸೈಕ್ಲೋನ್ ಎಫೆಕ್ಟ್ ನಿಂದಾಗಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾಗಿದೆ.

ಕೊಪ್ಪಳದಲ್ಲೂ ನಿರಂತರ ಮಳೆ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ರಘುನಾಥನಹಳ್ಳಿಯಿಂದ ಬರುವ ಹಳ್ಳದ ನೀರು ಹೊಲೆಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯ ಭರ್ತಿಗೊಂಡಿದ್ದು, ಜಲಾಶಯದಿಂದ ಈಗ 17,250 ಕ್ಯೂಸೆಕ್ ನೀರು ಹಳ್ಳಕ್ಕೆ ಬಿಡುಗಡೆಗೊಂಡಿದೆ.

ಇದನ್ನೂ ಓದಿ | ನೈಋತ್ಯ ಮುಂಗಾರು ಅಂಡಮಾನ್‌ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ

Exit mobile version