ಕೊಡಗು/ಬೆಂಗಳೂರು: ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮಡಿಕೇರಿ,ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಭಾಗದಲ್ಲೂ ಶುಕ್ರವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ನದಿ ತೊರೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಬ್ರಹ್ಮಗಿರಿ ಬೆಟ್ಟ ಭಾಗದಲ್ಲೂ ಎಡಬಿಡದೆ ಮಳೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ.
ಹಾರಂಗಿ ಜಲಾಶಯದ ವ್ಯಾಪ್ತಿಯಲ್ಲೂ ಭಾರಿ ಮಳೆಯಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದ್ದು, ಬಹುತೇಕ ಭರ್ತಿಯಾಗಿದೆ. ಶಾಸಕ ಅಪ್ಪಚ್ಚು ರಂಜನ್ ಅವರು ಜಲಾಶಯಕ್ಕೆ ಇಂದು ಬಾಗಿನ ಸಮರ್ಪಿಸಲಿದ್ದಾರೆ.
ನೈಋತ್ಯ ಮುಂಗಾರು ಚುರುಕು
ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆಯಾಗುವ ನಿರೀಕ್ಷೆ ಇದೆ. ಇನ್ನೂ ಮೂರು ದಿನ ಕರಾವಳಿ ಜಿಲ್ಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಜುಲೈ ೪ರಂದು ಬೆಳಗಾವಿ, ಹಾವೇರಿ, ಧಾರಾವಾಡ, ಜುಲೈ ೨ರಂದು ಚಾಮರಾಜನಗರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಎರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಹಲವೆಡೆ ನಾಲ್ಕು ದಿನ ಮಳೆಯಾಗಬಹುದು. ಕರಾವಳಿ ತೀರದಲ್ಲಿ ಪ್ರತಿ ಗಂಟೆಗೆ ೪೦-೫೦ ಕಿ.ಮೀ. ವೇಗದಲ್ಲಿ ಗಾಳಿಯ ಚಲನೆ ಇರುವುದರಿಂದ
ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.