ಹಾವೇರಿ: ಜಿಲ್ಲೆಯಲ್ಲಿ ಭೀಕರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ವಿವಿಧೆಡೆ ಮಂಗಳವಾರವೂ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ಹಲವು ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಮಳೆಯ ಆರ್ಭಟಕ್ಕೆ ಸಾವು-ನೋವು ಸಂಭವಿಸಿ, ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳಿಗೂ ಹಾನಿಯಾಗಿದೆ.
ಮಹಿಳೆ ಸಾವು, ಯುವಕ ನಾಪತ್ತೆ
ನಿರಂತರ ಮಳೆಗೆ ಮನೆಗೋಡೆ ಕುಸಿದು ಹಾನಗಲ್ ತಾಲೂಕು ತುಮರಿಕೊಪ್ಪ ಗ್ರಾಮದ ನಿಂಬವ್ವ ಮೈಲಾರಪ್ಪ ನೆಗಳೂರು (48) ಮೃತಪಟ್ಟಿದ್ದಾರೆ. ಅದೇ ರೀತಿ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಸುನೀಲ್ ನೆಗಳೂರು (18) ನಾಪತ್ತೆಯಾದ ಯುವಕ. ಯುವಕನಿಗಾಗಿ ನುರಿತ ಈಜು ತಜ್ಞರು, ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ
ಸೇತುವೆ ಮೇಲೆ ತೆರಳುತ್ತಿದ್ದಾಗ ನೀರಿನ ರಭಸಕ್ಕೆ ಬೈಕ್ ಸವಾರ ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗಿದ್ದು, ಆತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಶಿಗ್ಗಾಂವಿ ತಾಲೂಕಿನ ಹಿರೇಮಲ್ಲೂರು ಮತ್ತು ಹನುಮರಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಪ್ರಭು ಯಂಕಪ್ಪ ಲಮಾಣಿ ಎಂಬಾತ ಬೈಕ್‌ನಲ್ಲಿ ತೆರಳುತ್ತಿದ್ದ. ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರಿಂದ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಈ ವೇಳೆ ಸ್ಥಳೀಯ ಯುವಕರು ಆತನನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ | Heavy Rain | ಸತತ ಮಳೆಯಿಂದ ಹಂಪಿಯ ಪ್ರಸನ್ನ ವಿರೂಪಾಕ್ಷ ದೇಗುಲಕ್ಕೆ ಹಾನಿ
ಅದೇ ರೀತಿ ಹಾನಗಲ್ ತಾಲೂಕಿನ ಮುಳಥಳ್ಳಿ ಗ್ರಾಮದ ಅಣಿಕಾಸ್ ಬಳಿ ಸೇತುವೆ ಮೇಲೆ ತೆರಳುತ್ತಿದ್ದಾಗ ಬೈಕ್ ಸವಾರ ಹಳ್ಳಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮುಳಥಳ್ಳಿ ಗ್ರಾಮದ ವೀರೇಶ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಳ್ಳಕ್ಕೆ ಬಿದ್ದಿದ್ದಾನೆ, ಆತನನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಹಾಗೆಯೇ ಹಾನಗಲ್ ತಾಲೂಕು ಉಪ್ಪುಣಸಿ ಗ್ರಾಮದ ಬಳಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದರೂ ನಿರ್ಲಕ್ಷಿಸಿ ಚಾಲಕನೊಬ್ಬ ಬಸ್ ಚಲಾಯಿಸಿದ್ದರಿಂದ ಪ್ರಯಾಣಿಕರು ಗಾಬರಿಗೊಂಡಿದ್ದರು. ಸ್ವಲ್ಪ ಸಮಸ್ಯೆಯಾಗಿದ್ದರೂ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.
ಅಪಾರ ಪ್ರಮಾಣದ ಬೆಳೆ ಹಾನಿ, ಕಂಗಾಲಾದ ರೈತರು
ಜಿಲ್ಲೆಯಲ್ಲಿ ಮಳೆಯ ರೌದ್ರ ನರ್ತನಕ್ಕೆ ವಿವಿಧೆಡೆ ಕೃಷಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬ್ಯಾಡಗಿ ತಾಲೂಕಿನ ಘಾಲಪೂಜಿ ಗ್ರಾಮದಲ್ಲಿ ತರಕಾರಿ ಬೆಳೆ ನೀರಿಗೆ ಕೊಚ್ಚಿ ಹೋಗಿದೆ. ಹಾಗೆಯೇ ಶಿಗ್ಗಾಂವಿ ತಾಲೂಕಿನಲ್ಲಿ ಬಾಪುಗೌಡ ಎಂಬುವವರು 4 ಎಕರೆಯಲ್ಲಿ ಬೆಳೆದು ಕಟಾವು ಮಾಡಿ ಗುಡ್ಡೆ ಹಾಕಿದ್ದ ಶೇಂಗಾ ನೀರುಪಾಲಾಗಿದೆ. ನಿರಂತರ ಮಳೆಗೆ ಶೇಂಗಾ ಸಂಗ್ರಹಿಸಿದ್ದ ಜಾಗದಲ್ಲೇ ಮೊಳಕೆಯೊಡೆದಿದ್ದು, ಲಕ್ಷಾಂತರ ರೂಪಾಯಿ ಫಸಲು ನಷ್ಟವಾಗಿದೆ. ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಶಿವಪ್ಪ ಅವರು ಮೂರು ಎಕರೆ ಹೊಲದಲ್ಲಿ ಬೆಳೆದಿದ್ದ ಸೌತೆಕಾಯಿ, ಹೀರೇಕಾಯಿ ಬೆಳೆ ನೀರುಪಾಲಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಿವಿಧ ಗ್ರಾಮಗಳು ಜಲಾವೃತ
ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ತತ್ತರಿಸಿ ಹೋಗಿದೆ. ಹಾವೇರಿಯ
ತಿಮ್ಮಾಪುರ ಗ್ರಾಮ ಜಲಾವೃತವಾಗಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಹೀಗಿದ್ದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಸಮಸ್ಯೆ ಆಲಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಹತ್ತಿಮತ್ತೂರು ಗ್ರಾಮದ ಕೆರೆ ಏರಿ ಒಡೆದು ಊರೆಲ್ಲ ಜಲಾವೃತವಾಗಿ ಪರದಾಡುವಂತಾಗಿದೆ. ಇನ್ನು ಹಾನಗಲ್ ತಾಲೂಕಿನ ಹೆರೂರ ಗ್ರಾಮದಲ್ಲಿ ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಧಾರಕಾರ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು.
ಇದನ್ನೂ ಓದಿ | Rain News | ಕೆರೆಕೋಡಿಯಲ್ಲಿ ಕೊಚ್ಚಿಹೋಗಿದ್ದ ಯುವಕ ಶವವಾಗಿ ಪತ್ತೆ